ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಹಾರ್ಮೂಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ವ್ಯಕ್ತಪಡಿಸಿರುವ ಅನುಮಾನಗಳಿಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಬಲವಾದ ಸ್ಪಷ್ಟನೆ ನೀಡಿದ್ದಾರೆ. ಭಾರತ ಮತ್ತು ಇರಾನ್ ನಡುವೆ ಯಾವುದೇ ರೀತಿಯ 'ರಹಸ್ಯ' ಅಥವಾ 'ವಿಶೇಷ' ಒಪ್ಪಂದಗಳು ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಇರಾನ್ ನಿಯಂತ್ರಣದಲ್ಲಿರುವ ಹಾರ್ಮೂಜ್ ಜಲಸಂಧಿಯ ಮೂಲಕ ಭಾರತದ ಎರಡು ಎಲ್‌ಪಿಜಿ ಟ್ಯಾಂಕರ್ ಹಡಗುಗಳಾದ 'ಶಿವಾಲಿಕ್' ಮತ್ತು 'ನಂದಾ ದೇವಿ' ಸುರಕ್ಷಿತವಾಗಿ ಸಂಚರಿಸಲು ಇರಾನ್ ಅನುಮತಿ ನೀಡಿತ್ತು. ಈ ಬೆಳವಣಿಗೆಯನ್ನು ಗಮನಿಸಿದ ಅಮೆರಿಕ ಮತ್ತು ಇತರ ಕೆಲವು ದೇಶಗಳು, ಭಾರತವು ಇರಾನ್ ಜೊತೆಗೆ ಯಾವುದಾದರೂ ಒಳಗ ಒಪ್ಪಂದ ಮಾಡಿಕೊಂಡಿದೆಯೇ ಎಂಬ ಪ್ರಶ್ನೆಯನ್ನು ಎತ್ತಿದ್ದವು. ಈ ಬಗ್ಗೆ ಸಂಸತ್ತಿನಲ್ಲಿ ಮತ್ತು ಮಾಧ್ಯಮಗಳೊಂದಿಗೆ ಮಾತನಾಡಿದ ಜೈಶಂಕರ್, "ಭಾರತೀಯ ಧ್ವಜ ಹೊತ್ತ ಹಡಗುಗಳ ಸಂಚಾರಕ್ಕೆ ಸಂಬಂಧಿಸಿದಂತೆ ಇರಾನ್ ಜೊತೆ ಯಾವುದೇ ಬ್ಲಾಂಕೆಟ್ ಒಪ್ಪಂದ (Blanket Arrangement) ಮಾಡಿಕೊಂಡಿಲ್ಲ. ನಮ್ಮ ನಡುವಿನ ಸುದೀರ್ಘ ರಾಜತಾಂತ್ರಿಕ ಸಂಬಂಧ ಮತ್ತು ನಿರಂತರ ಮಾತುಕತೆಯ ಫಲವಾಗಿ ಈ ಸಾಗಣೆ ಸಾಧ್ಯವಾಗಿದೆ" ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಹಡಗಿನ ಸಂಚಾರವನ್ನೂ ಪ್ರತ್ಯೇಕವಾಗಿ (Case-by-case basis) ಚರ್ಚಿಸಿ ನಿರ್ಧರಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ. ಭಾರತವು ಇರಾನ್‌ನಿಂದ ಯಾವುದೇ ವಿಶೇಷ ಸೌಲಭ್ಯವನ್ನು ಪ್ರತಿಫಲವಾಗಿ ಪಡೆದಿಲ್ಲ ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿಯೇ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಜಾಗತಿಕ ಇಂಧನ ಭದ್ರತೆಯ ದೃಷ್ಟಿಯಿಂದ ಹಾರ್ಮೂಜ್ ಮಾರ್ಗವು ಭಾರತಕ್ಕೆ ಅತ್ಯಂತ ಪ್ರಮುಖವಾಗಿದ್ದು, ಈ ಭಾಗದಲ್ಲಿ ಶಾಂತಿ ಸ್ಥಾಪಿಸಲು ಭಾರತವು ರಾಜತಾಂತ್ರಿಕ ಮಾರ್ಗವನ್ನೇ ನೆಚ್ಚಿಕೊಂಡಿದೆ ಎಂದು ಜೈಶಂಕರ್ ಪುನರುಚ್ಚರಿಸಿದ್ದಾರೆ.