ನವದೆಹಲಿ : ಪ್ರಸಕ್ತ ವರ್ಷ ಭಾರತವು ಮಳೆ ಕೊರತೆಯ ಸಮಸ್ಯೆ ಮತ್ತು ಬಿಸಿಲಿನ ಝಳಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ. ದೂರದ ಪೆಸಿಫಿಕ್ ಸಾಗರದಲ್ಲಿ 'ಸೂಪರ್ ಎಲ್ ನಿನೋ' ಸೃಷ್ಟಿಯಾಗುತ್ತಿದ್ದು, ಅದರ ಪರಿಣಾಮ ಭಾರತದ ಮೇಲೂ ಆಗಲಿದೆ ಎನ್ನಲಾಗಿದೆ. ಈ ವರ್ಷ ಸೂಪರ್ ಎಲ್ ನಿನೋ ಪರಿಣಾಮದ ಬಗ್ಗೆ ಜಾಗತಿಕ ಹವಾಮಾನ ಸಂಸ್ಥೆಗಳು ಎಚ್ಚರಿಸಿವೆ. ಅಮೆರಿಕದ 'ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ(ಎನ್‌ಒಎಎ) ವರದಿಯ ಪ್ರಕಾರ, ದೂರದ ಪೆಸಿಫಿಕ್ ಸಾಗರದ ಮೇಲ್ಮೈ ನೀರು ಬೆಚ್ಚಗಾಗುವ ಎಲ್ ನಿನೋ ವಿದ್ಯಮಾನದಿಂದಾಗಿ ಮಳೆ ಕೊರತೆಗೆ ಭಾರತವು ಸಾಕ್ಷಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ. ಜತೆಗೆ ವಿಶ್ವದ್ಯಾಂತ ಶಾಖ ಹೆಚ್ಚಳವಾಗುವ ಆತಂಕವನ್ನೂ ವ್ಯಕ್ತಪಡಿಸಲಾಗಿದೆ.
ಎಲ್ ನಿನೋ ಪರಿಣಾಮವು ರೂಪುಗೊಳ್ಳುವ ಸಾಧ್ಯತೆಯು ಜೂನ್‌ನಿಂದ ಆಗಸ್ಟ್ ಅವಧಿಯಲ್ಲಿ ಶೇ.62ರಷ್ಟಿದ್ದು, ವರ್ಷಾಂತ್ಯದ ವೇಳೆಗೆ ಶೇ.80 ಕ್ಕೆ ಏರಬಹುದು ಎಂದು ಅಂದಾಜಿಸಲಾಗಿದೆ. ಹಾಗಾಗಿ, ಭಾರತದಲ್ಲಿ ಬೇಸಿಗೆ ತಾಪ ಹೆಚ್ಚಳ ಜತೆಗೆ ಮುಂಗಾರು ಮಳೆಯ ಕೊರತೆಗೂ ಕಾರಣವಾಗಲಿದೆ ಎಂದು ಹೇಳಲಾಗುತ್ತಿದೆ. ಮುಂದಿನ 2 ತಿಂಗಳು ಪೆಸಿಫಿಕ್ ಮಹಾಸಾಗರದ ತಾಪಮಾನ ಹೇಗೆ ವಿಕಸನಗೊಳ್ಳುತ್ತದೆ ಮತ್ತು ಎಲ್ ನಿನೋ ಪರಿಸ್ಥಿತಿಗಳು ಬಲಗೊಳ್ಳುತ್ತವೆಯೇ ಎಂಬುದರ ಮೇಲೆ ಬೇಸಿಗೆ ತಾಪದ ಸ್ಪಷ್ಟ ಮಾಹಿತಿ ಅವಲಂಬಿಸಿದೆ. ಎಲ್ ನಿನೋ ವಿದ್ಯಮಾನ ಪರಿಣಾಮ ಬೀರಿದರೆ, ದೇಶದ ಬೇಸಿಗೆ ಹಾಗೂ ವಾರ್ಷಿಕ ಮಳೆಯ ಮೇಲೂ ಪರಿಣಾಮ ಬೀರಲಿದೆ. ಜತೆಗೆ, ತಾಪಮಾನವೂ ಹೆಚ್ಚಾಗಲಿದೆ. ಏತನ್ಮಧ್ಯೆ ಯುರೋಪ್ ಮೂಲದ ಹವಾಮಾನ ಸಂಸ್ಥೆಯೊಂದು, ಈ ಬಾರಿಯ ಎಲ್ ನಿನೋ ಪರಿಣಾಮ ಗಂಭೀರವಾಗಿರಲಿದ್ದು, ಸೂಪರ್ ಎಲ್ ನಿನೋ ರೂಪುಗೊಳ್ಳುವ ಬಗ್ಗೆ ಎಚ್ಚರಿಸಿದ್ದಾರೆ. ಸಾಮಾನ್ಯ ಎಲ್ ನಿನೋ ಸಂಭವಿಸುವ ಸಾಧ್ಯತೆ ಶೇ.98ರಷ್ಟಿದ್ದರೆ, ಸೂಪರ್ ಎಲ್ ನಿನೋ ಸಂಭವಿಸುವ ಸಾಧ್ಯತೆ ಶೇ.22ರಷ್ಟಿದೆ ಎಂದೂ ಹೇಳಿದ್ದಾರೆ. ಸೂಪರ್ ಎಲ್ ನಿನೋ ರೂಪುಗೊಂಡರೆ ಭಾರತದ ಮೇಲೆ ಮಾತ್ರವಲ್ಲದೆ, ವಿಶ್ವಾದ್ಯಂತ ಶಾಖ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನಲಾಗಿದೆ.