image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

13 ವರ್ಷಗಳಿಂದ ಕೋಮಾದಲಿದ್ದ ವ್ಯಕ್ತಿಗೆ ಗೌರವಯುತವಾಗಿ ಸಾಯಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್

13 ವರ್ಷಗಳಿಂದ ಕೋಮಾದಲಿದ್ದ ವ್ಯಕ್ತಿಗೆ ಗೌರವಯುತವಾಗಿ ಸಾಯಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ : 13 ವರ್ಷಗಳ ಹಿಂದೆ ಸಂಭವಿಸಿದ ಅಪಘಾತವೊಂದರಲ್ಲಿ ತೀವ್ರ ಮಿದುಳಿನ ಗಾಯಕ್ಕೆ ಒಳಗಾಗಿ ಕೋಮಾದಲ್ಲಿದ್ದ 32 ವರ್ಷದ ಹರೀಶ್ ರಾಣಾ ಅವರಿಗೆ ಗೌರವಯುತವಾಗಿ ಸಾಯಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಇದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ನ್ಯಾಯಾಲಯದ ಆದೇಶದ ಮೇರೆಗೆ ನೀಡಲಾದ ಮೊದಲ ‘ಪರೋಕ್ಷ ದಯಾಮರಣ’ ಪ್ರಕರಣವಾಗಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪನ್ನು ನೀಡಿದೆ. ಈ ತೀರ್ಪು 2018ರ ಸುಪ್ರೀಂ ಕೋರ್ಟ್ ದಯಾಮರಣದ ಮಾರ್ಗಸೂಚಿಗಳನ್ನು ಇನ್ನಷ್ಟು ಸ್ಪಷ್ಟಪಡಿಸಿದೆ. ಈ ಹಿಂದೆ ಕೇವಲ ವೆಂಟಿಲೇಟರ್ನಂತಹ ಜೀವ ರಕ್ಷಕ ವ್ಯವಸ್ಥೆಗಳನ್ನು ತೆಗೆದುಹಾಕಲು ಮಾತ್ರ ಅವಕಾಶವಿತ್ತು. ಆದರೆ, ಈ ತೀರ್ಪಿನಲ್ಲಿ ‘ಫೀಡಿಂಗ್ ಟ್ಯೂಬ್’ (ಆಹಾರ ನೀಡುವ ನಳಿಕೆ) ಮೂಲಕ ಜೀವ ಬೆಂಬಲ ಪಡೆಯುತ್ತಿರುವ ರೋಗಿಗಳಿಗೂ ದಯಾಮರಣ ಅನ್ವಯಿಸಬಹುದು ಎಂದು ಸ್ಪಷ್ಟಪಡಿಸಲಾಗಿದೆ.

ವೈದ್ಯಕೀಯ ವರದಿಗಳ ಪ್ರಕಾರ ಹರೀಶ್ ರಾಣಾ ಅವರ ಸ್ಥಿತಿ ಸುಧಾರಿಸುವ ಯಾವುದೇ ಲಕ್ಷಣಗಳಿರಲಿಲ್ಲ. ಆದರೆ, ಅವರಿಗೆ ಕೇವಲ ಪೈಪ್ ಮೂಲಕ ಆಹಾರ ನೀಡಲಾಗುತ್ತಿತ್ತು ಎಂಬ ಕಾರಣಕ್ಕೆ ಆಸ್ಪತ್ರೆ ಮಟ್ಟದಲ್ಲಿ ದಯಾಮರಣ ಪ್ರಕ್ರಿಯೆಗೆ ಅಡೆತಡೆ ಉಂಟಾಗಿತ್ತು. ತಮ್ಮ ಮಗನ ನರಕಯಾತನೆಯನ್ನು ನೋಡಲಾರದೆ ಹರೀಶ್ ರಾಣಾ ಅವರ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಂತಿಮವಾಗಿ ಸುಪ್ರೀಂ ಕೋರ್ಟ್ ವೈದ್ಯಕೀಯ ಚಿಕಿತ್ಸೆಯನ್ನು ಹಿಂಪಡೆಯಲು ಅನುಮತಿ ನೀಡುವ ಮೂಲಕ ಹರೀಶ್ ರಾಣಾ ಅವರಿಗೆ ‘ಗೌರವಯುತ ಸಾವು’ ಕಾಣಲು ಹಾದಿ ಮಾಡಿಕೊಟ್ಟಿದೆ. ಈ ತೀರ್ಪು ಭವಿಷ್ಯದಲ್ಲಿ ಚೇತರಿಕೆಯ ಸಾಧ್ಯತೆಯೇ ಇಲ್ಲದ ಮತ್ತು ಕೃತಕವಾಗಿ ಆಹಾರ ನೀಡುವ ಮೂಲಕ ಜೀವಂತವಾಗಿರಿಸಲಾದ ಸಾವಿರಾರು ರೋಗಿಗಳ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಬದುಕುವ ಹಕ್ಕಿನಂತೆಯೇ ಪ್ರತಿಯೊಬ್ಬರಿಗೂ ಘನತೆಯಿಂದ ಸಾಯುವ ಹಕ್ಕಿದೆ ಎಂಬುದನ್ನು ಈ ತೀರ್ಪು ಎತ್ತಿ ಹಿಡಿದಿದೆ.

Category
ಕರಾವಳಿ ತರಂಗಿಣಿ