ನವದೆಹಲಿ : ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಇದೀಗ 11ನೇ ದಿನಕ್ಕೆ ಕಾಲಿಟ್ಟಿದ್ದು, ಸಂಘರ್ಷದಿಂದ ಮಧ್ಯಪ್ರಾಚ್ಯ ಸಂಪೂರ್ಣವಾಗಿ ತತ್ತರಿಸಿದೆ. ಮತ್ತೊಂದೆಡೆ, ಯುದ್ಧದ ಪರಿಸ್ಥಿತಿ ಇನ್ನಷ್ಟು ತೀವ್ರಗೊಂಡಿರುವ ಹಿನ್ನೆಲೆ ಇದೀಗ ಭಾರತ ಸೇರಿ ಹಲವು ರಾಷ್ಟ್ರಗಳಿಗೆ ಇಂಧನ ಬಿಕ್ಕಟ್ಟು ಎದುರಾಗಿದೆ. ಇರಾನ್-ಇಸ್ರೇಲ್ ಯುದ್ಧದ ಬಿಸಿ ಈಗ ಗೃಹ ಬಳಕೆ ಸಿಲಿಂಡರ್ಗೆ ತಟ್ಟಿದ್ದು, ಭಾರತದಲ್ಲಿ ದಿಢೀರ್ 60 ರೂ.ಗೆ ಅನಿಲ ಬೆಲೆ ಏರಿದೆ. ಇದು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದು, ಹೋಟೆಲ್ ಉದ್ಯಮವನ್ನೇ ನಂಬಿರುವ ಜನರಿಗೆ ದೊಡ್ಡ ಹೊಡೆತ ನೀಡಿದೆ. ಬೆಂಗಳೂರು, ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ದರ ಏರಿಕೆ ಹಾಗೂ ಸಿಲಿಂಡರ್ಗಳ ಸರಬರಾಜಿನಲ್ಲಿ ಆಗಿರುವ ವ್ಯತ್ಯಯದಿಂದ ಇಂದು ಮಾಲೀಕರು ಹೋಟೆಲ್ಗಳನ್ನೇ ತೆರೆದಿಲ್ಲ. ಕೇವಲ ಕಾಫಿ-ಟೀ ಕೌಂಟರ್ಗಳನ್ನು ತೆರೆಯುವ ಮೂಲಕ ಯುದ್ಧವನ್ನು ಮುಂದುವರಿಸಿರುವ ರಾಷ್ಟ್ರಗಳಿಗೆ ಹಿಡಿಶಾಪ ಹಾಕಿದ್ದಾರೆ. ಮತ್ತೊಂದೆಡೆ, ಇತರ ದೇಶಗಳಿಗೆ ಹೋಲಿಸಿದರೆ ಭಾರತ ಸುಧಾರಿಸಿಕೊಳ್ಳುವ ಮಟ್ಟದಲ್ಲಿದೆ. ಇದಕ್ಕೆ ಕಾರಣ, 9 ರಾಷ್ಟ್ರಗಳು ತೀವ್ರ ಇಂಧನ ಬಿಕ್ಕಟ್ಟಿನಿಂದ ಬಳಲುತ್ತಿವೆ. ಚೀನಾ, ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಪೋಲೆಂಡ್, ವಿಯೆಟ್ನಾಂ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೋನೇಷ್ಯಾದಂತಹ ದೇಶಗಳು ತೀವ್ರ ಇಂಧನ ಕೊರತೆಯನ್ನು ಅನುಭವಿಸುತ್ತಿವೆ. ಪ್ರಸ್ತುತ, ಇರಾನ್ ಇನ್ನೂ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿಲ್ಲ. ಇದೇ ಇಷ್ಟೆಲ್ಲ ಸಮಸ್ಯೆಗೆ ಮೂಲ ಕಾರಣ.
ಹಾರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದ ತೈಲ ಬೆಲೆಗಳು ಶೇ.25ರಷ್ಟು ಹೆಚ್ಚಾಗಿದೆ. ಈ ಪರಿಸ್ಥಿತಿಯ ಬೆನ್ನಲ್ಲೇ, ಆಯಾ ದೇಶದ ಸರ್ಕಾರಗಳು ಇಂಧನ ಸರಬರಾಜುಗಳನ್ನು ಆದಷ್ಟು ಲಿಮಿಟ್ ಮಾಡಲು ಮಹತ್ವದ ನಿರ್ಧಾರಗಳನ್ನೇ ತೆಗೆದುಕೊಂಡಿವೆ. ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳನ್ನು ಮುಚ್ಚುವಂತಹ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಇಂಧನವನ್ನು ಉಳಿಸಲು ಮುಂದಾಗಿವೆ. ಇದರಿಂದ ಬೇಗ ಖಾಲಿಯಾಗುವ ಇಂಧನ, ಇನ್ನಷ್ಟು ದಿನಗಳ ಕಾಲ ಲಭ್ಯವಿರಲಿದೆ ಎಂಬ ಲೆಕ್ಕಾಚಾರ. ಪ್ರಸ್ತುತ, ಪೋಲೆಂಡ್ ಮತ್ತು ಫ್ರಾನ್ಸ್‌ನಲ್ಲಿ ಇಂಧನ ಬೆಲೆಗಳು ದುಬಾರಿ ಆಗಿವೆ. ಇದು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ ಎಂದು ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಕಳವಳ ವ್ಯಕ್ತಪಡಿಸಿದ್ದಾರೆ. ಎರಡೂ ದೇಶಗಳಲ್ಲಿ ಪೆಟ್ರೋಲ್ ಪಂಪ್‌ಗಳಲ್ಲಿ ದೀರ್ಘ ಸರತಿ ಸಾಲುಗಳು ಕಂಡುಬಂದಿವೆ. ಹೆಚ್ಚುತ್ತಿರುವ ಹಣದುಬ್ಬರದಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಪೋಲೆಂಡ್‌ನಲ್ಲೂ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಒಂದು ವಾರದಲ್ಲಿ ಪೆಟ್ರೋಲ್ ದರವು ಶೇ.14ರಷ್ಟು ಜಾಸ್ತಿಯಾಗಿದೆ. ಇನ್ನು ಇಂಡೋನೇಷ್ಯಾ ಮತ್ತು ವಿಯೆಟ್ನಾಂನಂತಹ ದೇಶಗಳು ಇಂಧನ ಪಡಿತರವನ್ನು ಆರಂಭಿಸುವಂತ ಶೋಚನೀಯ ಸ್ಥಿತಿಗೆ ದೂಡಿದೆ.