ಕುನೋ : ಭಾರತದಲ್ಲಿ ಪ್ರಾಣಿಗಳ ಸಂತತಿ ಹಾಗೂ ಸಮತೋಲನ ಕಾಪಾಡಿಕೊಳ್ಳಲು ಪ್ರಧಾನಿ ಮೋದಿ ಸರ್ಕಾರ ಆಫ್ರಿಕಾ ದೇಶಗಳಿಂದ ಚೀತಾಗಳನ್ನು ಆಮದು ಮಾಡಿಕೊಂಡಿದೆ. ಈ ವಿಶೇಷ ಯೋಜನೆಯಡಿ ಹಂತ ಹಂತವಾಗಿ ಚೀತಾಗಳನ್ನು ಭಾರತದ ಕುನೋ ರಾಷ್ಟ್ರೀಯ ಅಭಯಾರಣ್ಯಕ್ಕೆ ಬಿಡಲಾಗಿದೆ. ಈ ಪೈಕಿ ಹೆಣ್ಣು ಚೀತಾ ಜ್ವಾಲಾ ಮೂರನೇ ಬಾರಿಗೆ ಭಾರತದಲ್ಲಿ ಮರಿಗಳಿಗೆ ಜನ್ಮ ನೀಡಿದೆ. ಈ ಬಾರಿ 5 ಮರಿಗಳಿಗೆ ಜನ್ಮ ನೀಡಿದೆ. ಮರಿಗಳ ವಿಡಿಯೋವನ್ನು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಪೋಸ್ಟ್ ಮಾಡಿದ್ದಾರೆ. ಭಾರತದಲ್ಲಿ ಸಂಪೂರ್ಣವಾಗಿ ನಶಿಸಿ ಹೋಗಿದ್ದ ಚೀತಾ ಸಂತತಿಯನ್ನು ಬೆಳೆಸಲು ನಮಿಬಿಯಾದಿಂದ ಚೀತಾಗಳನ್ನು ತರಿಸಿಕೊಳ್ಳಲಾಗಿತ್ತು. ಇದೀಗ ಭಾರತದಲ್ಲಿ ಚೀತಾ ಸಂತತಿ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಜ್ವಾಲಾ 5 ಮರಿಗಳಿಗೆ ಜನ್ಮ ನೀಡಿದ ಬೆನ್ನಲ್ಲೇ 48ದ್ದ ಚೀತಾ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ವಿಶೇಷ ಅಂದರೆ ಭಾರತಕ್ಕೆ ತರಿಸಿಕೊಂಡ ಬಳಿಕ ಕುನಾ ರಾಷ್ಟ್ರೀಯ ಅರಣ್ಯದಲ್ಲಿ 33 ಮರಿಗಳಿಗೆ ಜನ್ಮ ನೀಡಿದೆ. ಕೇಂದ್ರ ಸಚಿವ ಭೂಪೇಂದ್ರ ಯಾದವ್ ಚೀತಾ ಮರಿಗಳ ವಡಿಯೋ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಅತ್ಯಂತ ಮಹತ್ವದ ಚೀತಾ ಯೋಜನೆ ಅತ್ಯಂತ ಯಶಸ್ವಿಯಾಗಿದೆ ಎಂದಿದ್ದಾರೆ. ಫೆಬ್ರವರಿ 28ರಂದು ಬೋಟ್ಸ್ವಾನದಿಂದ ಮಧ್ಯಪ್ರದೇಶಕ್ಕೆ 9 ಚೀತಾಗಳನ್ನು ತರಿಸಿಕೊಳ್ಳಲಾಗಿದೆ. ಈ ಮೂಲಕ ಚೀತಾ ಯೋಜನೆಗೆ ಮತ್ತಷ್ಟು ವೇಗ ನೀಡಲಾಗಿದೆ.
2022ರ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ನಮೀಬಿಯಾದಿಂದ 8 ಚೀತಾಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. 2023ರ ಫೆಬ್ರವರಿಯಲ್ಲಿ ಎರಡನೇ ಹಂತದಲ್ಲಿ 12 ಚೀತಾಗಳನ್ನು ತರಿಸಿಕೊಳ್ಳಲಾಗಿತ್ತು. ಆರಂಭಿಕ ಹಂತದಲ್ಲಿ ಚೀತಾ ಯೋಜನೆ ತೀವ್ರ ಸವಾಲಾಗಿತ್ತು. ಇಷ್ಟೇ ಅಲ್ಲ ಟೀಕೆಗೆ ಗುರಿಯಾಗಿತ್ತು. ಕಾರಣ ಆಫ್ರಿಕಾ ವಾತಾವರಣದಿಂದ ಭಾರತದ ವಾತಾವರಣಕ್ಕೆ ಒಗ್ಗಿಕೊಳ್ಳಲು ಚೀತಾಗಳಿಗೆ ಕಷ್ಟವಾಗಿತ್ತು. ಹೀಗಾಗಿ ಒಟ್ಟು 20 ಚೀತಾಗಳ ಪೈಕಿ 5 ಚೀತಾ ಮೃತಪಟ್ಟಿತ್ತು. ಇದಾದ ಬಳಿಕ ಭಾರತದಲ್ಲಿ ಜನ್ಮ ನೀಡಿದ 10 ಮರಿಗಳು ವಾತಾವರಣ ಹಾಗೂ ಇತರ ಕಾರಣಗಳಿಂದ ಮೃತಪಟ್ಟಿತ್ತು. 2023ರ ಅಂತ್ಯದ ವೇಳೆ ನಮೀಬಿಯಾ ಚೀತಾಗಳು ಭಾರತದ ವಾತಾವರಣಕ್ಕೆ ಒಗ್ಗಿಕೊಂಡಿತ್ತು. ಇದೀಗ ಈ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಸದ್ಯ ಜಲ್ವಾ ಹೆಣ್ಣು ಚೀತಾ ಜನ್ಮ ನೀಡಿದ 5 ಮರಿಗಳು ಆರೋಗ್ಯವಾಗಿದೆ ಎಂದು ಕುನೋ ರಾಷ್ಟ್ರೀಯ ಅರಣ್ಯದ ಆರೋಗ್ಯ ಸಿಬ್ಬಂದಿಗಳು ಹೇಳಿದ್ದಾರೆ.