image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ತಮಗೆ ಬೇಕಾದ ಸ್ಥಳದಲ್ಲೇ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹಕ್ಕು ಮಂಡಿಸುವಂತಿಲ್ಲ : ಬಾಂಬೆ ಹೈಕೋರ್ಟ್

ತಮಗೆ ಬೇಕಾದ ಸ್ಥಳದಲ್ಲೇ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹಕ್ಕು ಮಂಡಿಸುವಂತಿಲ್ಲ : ಬಾಂಬೆ ಹೈಕೋರ್ಟ್

ಮುಂಬೈ : ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪವಿತ್ರ ರಂಜಾನ್ ಮಾಸದಲ್ಲಿ ನಮಾಜ್ ಮಾಡಲು ಅವಕಾಶ ಕೋರಿ ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಚಾಲಕರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಇಂತಹ ಮನವಿಗಳಿಗಿಂತ ವಿಮಾನ ನಿಲ್ದಾಣದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ಪಿ. ಕೊಲಾಬಾವಾಲಾ ಮತ್ತು ಫಿರ್ದೋಶ್ ಪೂನಾವಾಲಾ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಸ್ಲಿಮರಿಗೆ ರಂಜಾನ್ ಪ್ರಮುಖ ಧಾರ್ಮಿಕ ಆಚರಣೆಯ ಅವಧಿಯಾಗಿದೆ. ಆದರೆ, ವಿಮಾನ ನಿಲ್ದಾಣದಂತಹ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ತಮಗೆ ಬೇಕಾದ ಸ್ಥಳದಲ್ಲೇ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಹಕ್ಕು ಮಂಡಿಸುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ. ಟ್ಯಾಕ್ಸಿ-ರಿಕ್ಷಾ ಓಲಾ-ಉಬರ್ ಮೆನ್ಸ್ ಯೂನಿಯನ್ ಈ ಅರ್ಜಿಯನ್ನು ಸಲ್ಲಿಸಿತ್ತು. ಹಿಂದೆ ವಿಮಾನ ನಿಲ್ದಾಣದ ಬಳಿ ಇದ್ದ ತಾತ್ಕಾಲಿಕ ಶೆಡ್‌ನಲ್ಲಿ ಚಾಲಕರು ನಮಾಜ್ ಮಾಡುತ್ತಿದ್ದರು. ಆದರೆ, ಕಳೆದ ವರ್ಷ ಅಧಿಕಾರಿಗಳು ಆ ಕಟ್ಟಡವನ್ನು ತೆರವುಗೊಳಿಸಿದ್ದರು. ಹೀಗಾಗಿ, ಪ್ರಾರ್ಥನೆಗಾಗಿ ಅದೇ ಸ್ಥಳದಲ್ಲಿ ಅಥವಾ ಸಮೀಪದ ಬೇರೆ ಜಾಗದಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ಅರ್ಜಿದಾರರು ಕೋರಿದ್ದರು.

ಆದರೆ, ಈ ಬಗ್ಗೆ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ವಿಮಾನ ನಿಲ್ದಾಣದ ಸಮೀಪದ 7 ವಿವಿಧ ಸ್ಥಳಗಳನ್ನು ವೀಕ್ಷಿಸಿದ್ದರು. ಸಂಚಾರ ದಟ್ಟಣೆ, ಭದ್ರತಾ ಕಾಳಜಿ ಮತ್ತು ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನೆಗಳ ಹಿನ್ನೆಲೆಯಲ್ಲಿ ಯಾವುದೇ ಜಾಗವೂ ಪ್ರಾರ್ಥನೆಗೆ ಸೂಕ್ತವಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ವರದಿಯನ್ನು ಪರಿಶೀಲಿಸಿದ ನ್ಯಾಯಾಲಯವು, ಇದು ವಿಮಾನ ನಿಲ್ದಾಣದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಅವಕಾಶ ನೀಡಲಾಗದು ಎಂದಿದೆ. "ವಿಮಾನ ನಿಲ್ದಾಣದ ಬಳಿ ಪ್ರಾರ್ಥನೆಗೆ ಜಾಗ ನೀಡುವ ಪ್ರಶ್ನೆಯೇ ಇಲ್ಲ. ಧರ್ಮವೇ ಆಗಿರಲಿ ಅಥವಾ ಬೇರೆ ಯಾವುದೇ ವಿಚಾರವಿರಲಿ, ಭದ್ರತೆಯೇ ಮೊದಲ ಆದ್ಯತೆ. ಎಲ್ಲಾ ಧರ್ಮದವರೂ ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ" ಎಂದು ಕೋರ್ಟ್ ಹೇಳಿದೆ. ವಿಮಾನ ನಿಲ್ದಾಣದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಮದರಸಾದಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಪೀಠವು ಬೆಟ್ಟು ಮಾಡಿದೆ. "ನಾಳೆ ನೀವು ಮುಂಬೈನ ಓವಲ್ ಮೈದಾನದ (ದಕ್ಷಿಣ ಮುಂಬೈನ ಆಟದ ಮೈದಾನ) ಮಧ್ಯದಲ್ಲಿ ನಿಂತು ನಮಾಜ್ ಮಾಡಬೇಕು ಎಂದರೆ, ಅದು ಸಾಧ್ಯವಿಲ್ಲ. ಪ್ರಾರ್ಥನೆಗೆ ಜಾಗವನ್ನು ನೀವೇ ನಿರ್ಧರಿಸುವಂತಿಲ್ಲ" ಎಂದು ಅರ್ಜಿದಾರರಿಗೆ ತಿಳಿಸಿದೆ. "ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದನ್ನು ಯಾರೂ ತಡೆಯುತ್ತಿಲ್ಲ, ಆದರೆ ಅದನ್ನು ಎಲ್ಲಿ ಬೇಕಾದರೂ ಮಾಡುವಂತಿಲ್ಲ. ಭದ್ರತಾ ಕಾಳಜಿಗಳು ಅತ್ಯಂತ ಗಂಭೀರವಾದವುಗಳು" ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಪ್ರಪಂಚದ ಯಾವುದೇ ವಿಮಾನ ನಿಲ್ದಾಣಗಳ ಬಳಿ ಇಂತಹ ವ್ಯವಸ್ಥೆಗಳಿರುವುದನ್ನು ತಾವು ನೋಡಿಲ್ಲ ಎಂದ ನ್ಯಾಯಾಲಯವು, ಭದ್ರತೆಗೆ ಉನ್ನತ ಆದ್ಯತೆ ನೀಡಲೇಬೇಕು ಎಂದು ಒತ್ತಿ ಹೇಳಿದೆ. ಸದ್ಯಕ್ಕೆ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಭವಿಷ್ಯದಲ್ಲಿ ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಚಾಲಕರಿಗೆ ಸೂಚಿಸಿದೆ. ಟರ್ಮಿನಲ್ 1 ರ ಮರು-ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ನಂತರ, ಪ್ರಾರ್ಥನೆಗಾಗಿ ಮೀಸಲಾದ ಸ್ಥಳವನ್ನು ಒದಗಿಸುವ ಬಗ್ಗೆ ಅಧಿಕಾರಿಗಳು ಪರಿಗಣಿಸಬಹುದು ಎಂದು ಹೇಳಿದೆ. ಅಲ್ಲದೆ, ಪ್ರಯಾಣಿಕರಿಗೆ ಸೇವೆ ಸಲ್ಲಿಸುವಲ್ಲಿ ಟ್ಯಾಕ್ಸಿ ಮತ್ತು ಆಟೋ ಚಾಲಕರ ಪಾತ್ರವನ್ನು ಶ್ಲಾಘಿಸಿದ ಕೋರ್ಟ್, ಭವಿಷ್ಯದ ಮೂಲಸೌಕರ್ಯ ಯೋಜನೆಗಳನ್ನು ಸಿದ್ಧಪಡಿಸುವಾಗ ಅವರ ಕಾಳಜಿಯನ್ನು ಗಮನದಲ್ಲಿರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ.

Category
ಕರಾವಳಿ ತರಂಗಿಣಿ