image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಧ್ಯಪ್ರಾಚ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ತೀವ್ರ ಕಳವಳ, ಶಾಂತಿ ಕಾಪಾಡುವಂತೆ ಎಲ್ಲಾ ರಾಷ್ಟ್ರಗಳಿಗೆ ಮನವಿ

ಮಧ್ಯಪ್ರಾಚ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ತೀವ್ರ ಕಳವಳ, ಶಾಂತಿ ಕಾಪಾಡುವಂತೆ ಎಲ್ಲಾ ರಾಷ್ಟ್ರಗಳಿಗೆ ಮನವಿ

ನವದೆಹಲಿ : ಮಧ್ಯಪ್ರಾಚ್ಯದ ರಾಷ್ಟ್ರಗಳಾದ ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವಿನ ಸೇನಾ ಸಂಘರ್ಷದ ಕುರಿತು ಭಾರತ ಸರ್ಕಾರವು ತನ್ನ ಮೊದಲ ಅಧಿಕೃತ ಪ್ರತಿಕ್ರಿಯೆಯನ್ನು ಬಿಡುಗಡೆ ಮಾಡಿದೆ. ಅದರಂತೆ, ಈ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಎಲ್ಲಾ ರಾಷ್ಟ್ರಗಳಿಗೆ ಮನವಿ ಮಾಡಿದೆ. ಇದರೊಂದಿಗೆ ಸಂಘರ್ಷದ ಹಾದಿಗಿಂತ ರಾಜತಾಂತ್ರಿಕ ಮಾತುಕತೆಗಳ ಮೂಲಕವೇ ಸಮಸ್ಯೆ ಬಗೆಹರಿಯಬೇಕು ಎಂದು ಭಾರತ ಸರ್ಕಾರ ತಿಳಿಸಿದೆ. ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಎರಡು ಕಡೆಯವರು ಕೂಡಲೇ ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಿ ಸಂಯಮ ಕಾಯ್ದುಕೊಳ್ಳುವಂತೆ ಕೋರಲಾಗಿದೆ. ಜೊತೆಗೆ ಯುದ್ಧದ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಅಂತರಾಷ್ಟ್ರೀಯ ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯಿಂದ ಮಾತ್ರ ಪರಿಹರಿಸಲು ಸಾಧ್ಯ ಎಂದು ಭಾರತ ಪ್ರತಿಪಾದಿಸಿದೆ. ಅಲ್ಲದೆ, ಪ್ರತಿಯೊಂದು ರಾಷ್ಟ್ರದ ಸಾರ್ವಭೌಮತ್ವವನ್ನು ಗೌರವಿಸುವುದು ಶಾಂತಿ ಸ್ಥಾಪನೆಗೆ ಅತಿ ಮುಖ್ಯ ಎಂದು ಎಚ್ಚರಿಸಿದೆ. ಏತನ್ಮಧ್ಯೆ, ಇರಾನ್ ಮತ್ತು ಇಸ್ರೇಲ್ ದೇಶಗಳಲ್ಲಿ ನೆಲೆಸಿರುವ ಸಾವಿರಾರು ಭಾರತೀಯರ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರವು ಹೆಚ್ಚಿನ ಗಮನ ನೀಡುತ್ತಿದೆ. ಅದರಂತೆ, ಅಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಸತತವಾಗಿ ಅನಿವಾಸಿ ಭಾರತೀಯರ ಸಂಪರ್ಕದಲ್ಲಿದ್ದು, ಸರ್ಕಾರವು ವಿಶೇಷ ಸಲಹಾ ಸೂಚನೆಯನ್ನು ಹೊರಡಿಸಿದ್ದು, ಭಾರತೀಯರು ಅತ್ಯಂತ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದೆ. ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣವೇ ಭಾರತೀಯ ದೂತಾವಾಸವನ್ನು ಸಂಪರ್ಕಿಸಲು ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ.

Category
ಕರಾವಳಿ ತರಂಗಿಣಿ