ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಸಂಭವಿಸಿದ ಭೀಕರ ಸ್ಪೋಟ ಮತ್ತು ಅಗ್ನಿ ದುರಂತಕ್ಕೆ 18 ಮಂದಿ ಬಲಿಯಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಪಟಾಕಿ ತಯಾರಿಕಾ ಘಟಕದಲ್ಲಿ ದಿಢೀರ್ ಸ್ಫೋಟ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಾರ್ಖಾನೆಯನ್ನು ಆವರಿಸಿಕೊಂಡಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಎಂದು ಹೇಳಲಾಗಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳೆಯರು ಎಂದು ತಿಳಿದುಬಂದಿದ್ದು, ಸ್ಫೋಟದ ಸಮಯದಲ್ಲಿ ಸುಮಾರು 30ಕ್ಕೂ ಹೆಚ್ಚು ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯಲ್ಲಿ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳಿರುವುದರಿಂದ ಬೆಂಕಿ ದಟ್ಟವಾಗಿ ಆವರಿಸಿದೆ. ಘಟನೆಯಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ.
ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿ ಪಟಾಕಿ ತಯಾರಿಸುತ್ತಿದ್ದದ್ದೇ ಈ ಭೀಕರ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ.