ನವದೆಹಲಿ : ದೇಶದಲ್ಲಿ ಚುನಾವಣೆಗಳಿಗೂ ಮುನ್ನ ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಕೊಡುಗೆಗಳ ವಿರುದ್ಧ ಸುಪ್ರೀಂ ಕೋರ್ಟ್ ಇಂದು ಅತ್ಯಂತ ಕಠಿಣ ನಿಲುವು ತಳೆದಿದೆ. ತಮಿಳುನಾಡು ಸರ್ಕಾರದ ವಿರುದ್ಧ ಹರಿಹಾಯ್ದ ನ್ಯಾಯಾಲಯ, ಇದು ಎಂತಹ ಸಂಸ್ಕೃತಿಯನ್ನು ಬೆಳೆಸುತ್ತಿದೆ ಎಂದು ಗಂಭೀರ ಪ್ರಶ್ನೆ ಎತ್ತಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, ಕಲ್ಯಾಣ ಯೋಜನೆಗಳು ಮತ್ತು ತುಷ್ಟೀಕರಣದ ನಡುವಿನ ವ್ಯತ್ಯಾಸವನ್ನು ಒತ್ತಿಹೇಳಿತು. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯ ವ್ಯಕ್ತಪಡಿಸಿದ ಪ್ರಮುಖ ಆತಂಕಗಳು ಇಲ್ಲಿವೆ. ನೀವು ಉಚಿತ ಆಹಾರ, ಉಚಿತ ವಿದ್ಯುತ್, ಉಚಿತ ಸೈಕಲ್‌ಗಳನ್ನು ನೀಡುತ್ತಾ ಹೋದರೆ, ನಾವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಎಂತಹ ಸಂಸ್ಕೃತಿಯನ್ನು ರೂಪಿಸುತ್ತಿದ್ದೇವೆ ಎಂದು ಸಿಜೆಐ ಪ್ರಶ್ನಿಸಿದ್ದಾರೆ.
ವಿದ್ಯುತ್ ಬಿಲ್ ಪಾವತಿಸಲು ಶಕ್ತಿಯಿಲ್ಲದವರಿಗೆ ನೆರವು ನೀಡುವುದು ಅರ್ಥಪೂರ್ಣವಾಗಿದೆ. ಆದರೆ, ಶ್ರೀಮಂತರು ಮತ್ತು ಬಡವರ ನಡುವೆ ವ್ಯತ್ಯಾಸ ಗುರುತಿಸದೆ ಎಲ್ಲರಿಗೂ ಉಚಿತವಾಗಿ ನೀಡುವುದು ಕೇವಲ ಮತಬ್ಯಾಂಕ್ ರಾಜಕಾರಣ ಅಥವಾ ತುಷ್ಟೀಕರಣವಲ್ಲವೇ? ಎಂದು ಕೋರ್ಟ್ ಕೇಳಿದೆ. ಉಚಿತ ಕೊಡುಗೆಗಳು ರಾಜ್ಯದ ಬೊಕ್ಕಸದ ಮೇಲೆ ಬೀರುವ ಪರಿಣಾಮ ಮತ್ತು ದೀರ್ಘಕಾಲೀನ ಆರ್ಥಿಕ ಶಿಸ್ತಿನ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ನ ಈ ಕಟು ಟೀಕೆಯು ಕೇವಲ ತಮಿಳುನಾಡಿಗೆ ಸೀಮಿತವಾಗಿಲ್ಲ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳ ಅಬ್ಬರ ಇರುವ ಈ ಸಮಯದಲ್ಲಿ, ನ್ಯಾಯಾಲಯದ ಈ ಹೇಳಿಕೆಗಳು ರಾಷ್ಟ್ರಮಟ್ಟದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿವೆ. ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವು ಈ ಬಗ್ಗೆ ಕಠಿಣ ನಿಯಮಾವಳಿಗಳನ್ನು ರೂಪಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ, ಮುಂದಿನ ದಿನಗಳಲ್ಲಿ 'ಉಚಿತ ಕೊಡುಗೆ' ಯಾವುದು ಮತ್ತು 'ಅಗತ್ಯ ಸೇವೆ' ಯಾವುದು ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.