ಅಸ್ಸಾಂ : ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಸ್ಸಾಂ ಪ್ರವಾಸದಲ್ಲಿದ್ದಾರೆ. ಅವರು ಗುವಾಹಟಿಯ ನೀಲಾಚಲ ಬೆಟ್ಟದಲ್ಲಿರುವ ಪವಿತ್ರ ಶಕ್ತಿಪೀಠವಾದ ಕಾಮಾಕ್ಯ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ದೇವಿಯ ದಿವ್ಯಾನುಗ್ರಹ ಪಡೆದು ನಾಡಿನ ಸಮಸ್ತ ಜನರ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಜೊತೆ ಪ್ರಿಯಾಂಕಾ ಗಾಂಧಿ ಅವರು ಸಹ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಗೆ ಮಾರ್ಚ್/ ಏಪ್ರಿಲ್ ತಿಂಗಳಿನಲ್ಲಿ ಚುನಾವಣೆ ನಡೆಯಲಿದೆ. ಡಿ.ಕೆ.ಶಿವಕುಮಾರ್ ಅಸ್ಸಾಂ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಯಾಗಿದ್ದಾರೆ. ಪ್ರಿಯಾಂಕಾ ಗಾಂಧಿ ಅಸ್ಸಾಂ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸ್ಕ್ರೀನಿಂಗ್ ಕಮಿಟಿ ಮುಖ್ಯಸ್ಥರು. ವಿಧಾನಸಭೆ ಚುನಾವಣೆಯ ತಯಾರಿ ಕುರಿತು ಸಭೆ ನಡೆಸಲು ಡಿ.ಕೆ.ಶಿವಕುಮಾರ್ ಅಸ್ಸಾಂಗೆ ತೆರಳಿದ್ದು, ಇಂದು ಪ್ರಿಯಾಂಕಾ ಗಾಂಧಿ ಸಹ ಅಲ್ಲಿಗೆ ಆಗಮಿಸಿದ್ದಾರೆ.
ಮಾರ್ಚ್‌ನಲ್ಲಿ ಚುನಾವಣಾ ಆಯೋಗ ಅಸ್ಸಾಂ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ. ರಾಜ್ಯದಲ್ಲಿ ಸದ್ಯ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಹಿಮಂತ ಬಿಸ್ವಾ ಶರ್ಮಾ ಜನಪ್ರಿಯ ಮುಖ್ಯಮಂತ್ರಿ. ಅಸ್ಸಾಂನಲ್ಲಿ 29 ಕಾಂಗ್ರೆಸ್ ಶಾಸಕರಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಗೆಲ್ಲಬೇಕು ಎಂದು ಕಾಂಗ್ರೆಸ್ ಪಕ್ಷ ತಂತ್ರ ರೂಪಿಸುತ್ತಿದೆ. ಆದ್ದರಿಂದ ಟಾಸ್ಕ್ ಮಾಸ್ಟರ್ ಡಿ.ಕೆ.ಶಿವಕುಮಾರ್ ಅವರನ್ನು ಉಸ್ತುವಾರಿಯಾಗಿ ನೇಮಕ ಮಾಡಿದೆ. ಅಸ್ಸಾಂ ವಿಧಾನಸಭೆ ಚುನಾವಣೆ ನಿಜವಾದ ಕಾಂಗ್ರೆಸ್ ಮತ್ತು ಹಳೆಯ ಕಾಂಗ್ರೆಸ್ ನಡುವಿನ ಹೋರಾಟ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮತ್ತು ಲೋಕಸಭೆ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯ್ ಬಣ್ಣಿಸಿದ್ದಾರೆ. ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಲು ಮುಂದಾಗಿದ್ದಾರೆ. ಇದು ಅಸ್ಸಾಂನಲ್ಲಿ ಕಾಂಗ್ರೆಸ್‌ನ ಆಂತರಿಕ ಜಗಳವನ್ನು ಬಹಿರಂಗ ಮಾಡಿದೆ. ಆದ್ದರಿಂದ ಇಂದು ಅಸ್ಸಾಂ ಕಾಂಗ್ರೆಸ್ ಮಹತ್ವದ ಸಭೆಯನ್ನು ಕರೆಯಲಾಗಿದೆ. ಸಂಸತ್ ಸದಸ್ಯೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಕೀಯ ವ್ಯವಹಾರಗಳ ಸಮಿತಿ, ಚುನಾವಣಾ ಸಮಿತಿ ಮತ್ತು ವಿವಿಧ ಸಂಘಟನೆಗಳ ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ. ಆದ್ದರಿಂದ ಚುನಾವಣಾ ಉಸ್ತುವಾರಿ ಡಿ.ಕೆ.ಶಿವಕುಮಾರ್ ಸಹ ಅಸ್ಸಾಂಗೆ ತೆರಳಿದ್ದಾರೆ.