ನವದೆಹಲಿ : ಮಂಗಳೂರಿನ ಇಎಸ್ಐ ಆಸ್ಪತ್ರೆಯನ್ನು ನೇರವಾಗಿ ಇಎಸ್‌ಐಸಿ (ESIC) ತನ್ನ ಸುಪರ್ದಿಗೆ ಪಡೆಯುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರಿಗೆ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಸಂಸದರು, ಮಂಗಳೂರಿನ ಇಎಸ್ಐ ಆಸ್ಪತ್ರೆಯು ಪ್ರಸ್ತುತ ಎದುರಿಸುತ್ತಿರುವ ಅನೇಕ ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಸಚಿವರ ಗಮನ ಸೆಳೆದಿದ್ದು, ದಕ್ಷಿಣ ಕನ್ನಡ ಮತ್ತು ಸುತ್ತ-ಮುತ್ತಲಿನ ಜಿಲ್ಲೆಗಳ ಸುಮಾರು 2.5 ಲಕ್ಷ ವಿಮಾದಾರರಿಗೆ ಸೇವೆ ನೀಡುತ್ತಿರುವ ಈ 100 ಹಾಸಿಗೆಗಳ ಆಸ್ಪತ್ರೆಯನ್ನು ಸುಸಜ್ಜಿತವಾಗಿ ಸೇವೆ ಸಲ್ಲಿಸಲು ಇಎಸ್ಐಸಿ (ESIC) ಸಂಸ್ಥೆಯು ನೇರವಾಗಿ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದರ ತುರ್ತು ಅಗತ್ಯದ ಬಗ್ಗೆ ಪ್ರಮುಖವಾಗಿ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಹಸ್ತಾಂತರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಈ ಹಿಂದೆ ನಡೆದ ಪ್ರಯತ್ನಗಳ ಬಗ್ಗೆಯೂ ಮಾಹಿತಿ ನೀಡಿದ ಸಂಸದರು, 2025ರ ಫೆಬ್ರವರಿಯಲ್ಲಿ ಇಎಸ್‌ಐಸಿ ಮಹಾನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ತಾವು ಚರ್ಚಿಸಿದ್ದು ಅವರ ಸೂಚನೆಯಂತೆ, ಇಎಸ್ಐ ಆಸ್ಪತ್ರೆಯ ಉತ್ತಮ ನಿರ್ವಹಣೆಗಾಗಿ ಸೊಸೈಟಿಯನ್ನು ರಚಿಸುವ ಕುರಿತು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು. ಅದಾದ ಬಳಿಕ ಕಳೆದ ಮೇ ತಿಂಗಳಲ್ಲಿ ದೆಹಲಿಯಲ್ಲಿರುವ ಇಎಸ್ ಐಸಿ ಪ್ರಧಾನ ಕಚೇರಿಯ ಉನ್ನತ ಮಟ್ಟದ ಅಧಿಕಾರಿಗಳ ತಂಡ ಕೂಡ ಮಂಗಳೂರಿನ ಶಿವಭಾಗ್ ನಲ್ಲಿರುವ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಇಲ್ಲಿನ ಸೌಲಭ್ಯ ಮತ್ತು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿತ್ತು. ಅಲ್ಲದೆ ಈ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಹಾಗೂ ಮೂಲಸೌಕರ್ಯ ಸುಧಾರಣೆಗೆ ಸಹಕಾರ ನೀಡುವುದಾಗಿ ಭರವಸೆ ನೀಡಿತ್ತು. ಈ ನಡುವೆ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಕೂಡ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿಯಾಗಿ ಸೊಸೈಟಿ ರಚನೆಗೆ ಶೀಘ್ರ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಇದರ ಫಲವಾಗಿ ರಾಜ್ಯ ಸರ್ಕಾರವು ಅಗತ್ಯವಿರುವ ಸೊಸೈಟಿಯನ್ನು ರಚಿಸಿದೆ ಎಂದು ಸಚಿವರಿಗೆ ಕ್ಯಾ. ಚೌಟ ಅವರು ವಿವರಿಸಿದರು.
ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆಯಿಂದ ಸೇವೆ ವ್ಯತ್ಯಯವಾಗುತ್ತಿದ್ದು ಇದರಿಂದ ಲಕ್ಷಾಂತರ ವಿಮಾದಾರರ ಮತ್ತು ಅವರ ಕುಟುಂಬಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸಾ ಸೌಲಭ್ಯಗಳು ದೊರೆಯುವುದಕ್ಕೆ ಅಡಚಣೆಯಾಗುತ್ತಿದೆ. ಇಎಸ್ಐಸಿ ಸಂಸ್ಥೆಯು ಆಸ್ಪತ್ರೆಯ ನೇರ ಸುಪರ್ದಿಗೆ ಪಡೆದುಕೊಂಡರೆ ಸಾಕಷ್ಟು ಸಿಬ್ಬಂದಿ ನೇಮಕ, ಆಡಳಿತಾತ್ಮಕ ಮತ್ತು ವೈದ್ಯಕೀಯ ಸೇವೆಗಳಲ್ಲಿ ಹೆಚ್ಚಿನ ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದು ಸಂಸದರು ಮನವಿ ಮಾಡಿದ್ದಾರೆ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು, ಈ ವಿಷಯವನ್ನು ಆದ್ಯತೆಯ ಮೇಲೆ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.