ನವದೆಹಲಿ : ಪಾಕಿಸ್ತಾನ ವಿರೋಧಿ ಸಂದೇಶ ಎನ್ನುವ ಕಾರಣಕ್ಕೆ ಪಾಕಿಸ್ತಾನ, ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳಲ್ಲಿ ಚಿತ್ರವನ್ನು ನಿಷೇಧಿಸಲಾಗಿತ್ತು. ಇನ್ನುಳಿದಂತೆ ವಿಶ್ವದಾದ್ಯಂತ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು. 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ನಟರಾದ ರಣ್‌ವೀರ್ ಸಿಂಗ್, ಅಕ್ಷಯ್ ಖನ್ನಾ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೀಕ್ವೆಲ್ ನೋಡಲು ಸಿನಿರಸಿಕರು ತುದಿಗಾಲಲ್ಲಿ ನಿಂತಿದ್ದಾರೆ. ಪಾಕಿಸ್ತಾನದ ಉಗ್ರ ಸಂಘಟನೆಗಳ ವಿರುದ್ಧ ಹೋರಾಡುವ ಭಾರತೀಯ ಸೈನಿಕನ ಕಥೆ 'ಧುರಂಧರ್' ಚಿತ್ರದಲ್ಲಿದೆ. ಖಂದಹಾರ್ ಹೈಜಾಕ್, 26/11ರ ಮುಂಬೈ ದಾಳಿ ವಿಚಾರಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ. ಪಾಕ್ ಒಂದು ಉಗ್ರರಾಷ್ಟ್ರ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಅದೇ ಕಾರಣಕ್ಕೆ ಅಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ. ಆದರೆ ಪೈರಸಿ ಸಿಡಿ ಮಾರಾಟ ಅವ್ಯಹತವಾಗಿ ನಡೀತಿದೆ. ಯೂಟ್ಯೂಬರ್ ಕಾರ್ಲ ರಾಕ್ ಹಂಚಿಕೊಂಡಿರುವ ವಿಡಿಯೋದಲ್ಲಿ ಅದು ಗೊತ್ತಾಗುತ್ತಿದೆ. ಪಾಕಿಸ್ತಾನದ ಕರಾಚಿಯ ರೈನ್‌ಬೋ ಸೆಂಟರ್ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್. ಇದೊಂದು ವಿಡಿಯೋ ಎಂಟರ್‌ಟೈನ್‌ಮೆಂಟ್ ಸೆಂಟರ್ ಆಗಿದ್ದು ದೇಶದ ವೀಡಿಯೊ ಪೈರಸಿ ಉದ್ಯಮವಾಗಿ ಹೆಸರಾಗಿದೆ. ಇದೇ ರೈನ್‌ಬೋ ಸೆಂಟರ್‌ನಲ್ಲಿ ಸುತ್ತಾಡಿ ಕಾರ್ಲ ರಾಕ್, ವ್ಲಾಗ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ 'ಧುರಂಧರ್' ಸಿನಿಮಾ ಪೈರಸಿ ಸಿಡಿಯನ್ನು 50 ಪಾಕಿಸ್ತಾನದ ರೂಪಾಯಿಯಲ್ಲಿ(ಭಾರತದ ರೂಪಾಯಿಯಲ್ಲಿ 16 ರೂಪಾಯಿಗೆ) ಮಾರುತ್ತಿದ್ದಾರೆ ಎಂದು ವರದಿಯಾಗಿದೆ.