ನವದೆಹಲಿ : ದೇಶದ ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ'ಗೆ ಹೆಚ್ಚಿನ ಗೌರವ ನೀಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯವು ಮಹತ್ವದ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ ರಾಷ್ಟ್ರಗೀತೆಯ ಮಾದರಿಯಲ್ಲೇ ವಂದೇ ಮಾತರಂ ಅನ್ನು ಹಾಡುವಾಗಲೂ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ಗೀತೆಯಾದ 'ವಂದೇ ಮಾತರಂ' ಕುರಿತು ಇತ್ತೀಚಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದೆ.
ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿಯನ್ನು ಹಾಡುವಾಗ ಅಥವಾ ಪ್ಲೇ ಮಾಡುವಾಗ ಸಭಿಕರು ಗೌರವಪೂರ್ವಕವಾಗಿ ಎದ್ದು ನಿಲ್ಲುವುದು ಕಡ್ಡಾಯವಾಗಿದೆ. ಯಾವುದೇ ಸಂದರ್ಭದಲ್ಲಿ ರಾಷ್ಟ್ರೀಯ ಗೀತೆ ಮತ್ತು ರಾಷ್ಟ್ರಗೀತೆ ಎರಡನ್ನೂ ಹಾಡಬೇಕಿದ್ದರೆ, ಮೊದಲು ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ ಅನ್ನು ಹಾಡಬೇಕು. ಪದ್ಮ ಪ್ರಶಸ್ತಿಗಳಂತಹ ನಾಗರಿಕ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಹಾಗೂ ರಾಷ್ಟ್ರಪತಿಗಳು ಭಾಗವಹಿಸುವ ಎಲ್ಲಾ ಕಾರ್ಯಕ್ರಮಗಳಲ್ಲಿ (ಅವರ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ) ‘ವಂದೇ ಮಾತರಂ’ ಅನ್ನು ಪ್ಲೇ ಮಾಡಲಾಗುವುದು. ರಾಷ್ಟ್ರೀಯ ಗೀತೆಯನ್ನು ಹಾಡುವ ಎಲ್ಲಾ ಸಂದರ್ಭಗಳಲ್ಲಿ, ಅದರ ಅಧಿಕೃತ ಆವೃತ್ತಿಯನ್ನು ಜನರೆಲ್ಲರೂ ಸೇರಿ ಸಾಮೂಹಿಕವಾಗಿ ಹಾಡತಕ್ಕದ್ದು ಎಂದು ತಿಳಿಸಲಾಗಿದೆ. ಶಾಲಾ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆ (ವಂದೇ ಮಾತರಂ) ಮತ್ತು ರಾಷ್ಟ್ರಗೀತೆಯನ್ನು (ಜನ ಗಣ ಮನ) ಹಾಡುವುದನ್ನು ಜನಪ್ರಿಯಗೊಳಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ರಾಷ್ಟ್ರಧ್ವಜದ ಬಗ್ಗೆ ಗೌರವವನ್ನು ಉತ್ತೇಜಿಸಲು ಶಾಲೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.