ಕೆನಡ : ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಮತ್ತು ಕೆನಡಾದ NSA ನಥಾಲಿ ಡ್ರೌಯಿನ್ ನಡುವೆ ನಡೆದ ಎರಡು ದಿನಗಳ ಮಹತ್ವದ ಸಭೆ, ಭಾರತ-ಕೆನಡಾ ಸಂಬಂಧಗಳಲ್ಲಿ ಹೊಸ ತಿರುವು ತಂದಿದೆ. ಈ ಸಭೆಯಲ್ಲಿ ಖಲಿಸ್ತಾನಿ ಚಟುವಟಿಕೆಗಳನ್ನು ಇನ್ನು ಮುಂದೆ ರಾಜಕೀಯ ಚಳುವಳಿಯಂತೆ ಅಲ್ಲ, ಸಂಘಟಿತ ಅಪರಾಧ ಮತ್ತು ಸಾರ್ವಜನಿಕ ಸುರಕ್ಷತಾ ಬೆದರಿಕೆಯಂತೆ ನೋಡುವುದಾಗಿ ಕೆನಡಾ ಸ್ಪಷ್ಟಪಡಿಸಿದೆ. ಈಗಿನಿಂದ ಕೆನಡಾ ಖಲಿಸ್ತಾನಿ ಜಾಲಗಳಿಗೆ ಸುರಕ್ಷಿತ ತಾಣವಾಗುವುದಿಲ್ಲ ಎಂಬ ಸಂದೇಶವನ್ನು ಒಟ್ಟಾವಾ ಸ್ಪಷ್ಟವಾಗಿ ನೀಡಿದ್ದಾರೆ. ಭಾರತ ವಿರೋಧಿ ಯಾವುದೇ ಚಟುವಟಿಕೆಗಳು ಕಂಡುಬಂದರೆ, ಅದರ ಬಗ್ಗೆ ತಕ್ಷಣವೇ ಭಾರತಕ್ಕೆ ಮಾಹಿತಿ ಹಂಚಿಕೊಳ್ಳಲಾಗುತ್ತದೆ ಎಂಬ ಭರವಸೆ ನೀಡಲಾಗಿದೆ. ಇಲ್ಲಿಯವರೆಗೆ ಕೆನಡಾ ಸರ್ಕಾರವು "ವಾಕ್ ಸ್ವಾತಂತ್ರ್ಯ"ದ ಹೆಸರಿನಲ್ಲಿ ಖಲಿಸ್ತಾನಿ ಗುಂಪುಗಳ ಅಸ್ತಿತ್ವವನ್ನೇ ಪ್ರಶ್ನಿಸುತ್ತಿತ್ತು. ಆದರೆ ಅಜಿತ್ ದೋವಲ್ ನೀಡಿದ ಬಲವಾದ ಸಾಕ್ಷ್ಯಗಳು ಮತ್ತು ಗುಪ್ತಚರ ಮಾಹಿತಿಗಳು, ಕೆನಡಾವನ್ನು ತನ್ನ ನಿಲುವನ್ನು 180 ಡಿಗ್ರಿಗಳಷ್ಟು ಬದಲಾಯಿಸಲು ಒತ್ತಾಯಿಸಿವೆ. ಈಗ ರಾಜಕೀಯ ರಕ್ಷಣೆಯ ಯುಗ ಮುಗಿದಿದೆ ಎಂಬ ಸಂದೇಶ ಸ್ಪಷ್ಟವಾಗಿದೆ.
ಈ ಸಭೆಯ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿ, ನೈಜ-ಸಮಯದ ಗುಪ್ತಚರ ಮಾಹಿತಿ ಹಂಚಿಕೆಗೆ ಒಪ್ಪಂದವಾಗಿದೆ. ಮಾದಕವಸ್ತು ಕಳ್ಳಸಾಗಣೆ, ಶಸ್ತ್ರಾಸ್ತ್ರ ಸಾಗಣೆ, ಹಣದ ಅಕ್ರಮ ವರ್ಗಾವಣೆ, ಸೈಬರ್ ಬೆದರಿಕೆಗಳು ಮತ್ತು ಭಯೋತ್ಪಾದನೆ - ಈ ಎಲ್ಲದಕ್ಕೂ ಸಂಬಂಧಿಸಿದ ಮಾಹಿತಿಯನ್ನು ಎರಡು ದೇಶಗಳು ತಕ್ಷಣವೇ ಹಂಚಿಕೊಳ್ಳಲಿವೆ. ವಿಶೇಷವಾಗಿ ಖಲಿಸ್ತಾನಿ ಸಂಪರ್ಕ ಹೊಂದಿರುವ ಗುಂಪುಗಳು ಕೇಂದ್ರಬಿಂದುವಾಗಿರುತ್ತವೆ. ಖಲಿಸ್ತಾನಿ ಸಂಘಟನೆಗಳ ಪ್ರಮುಖ ಹಣಕಾಸಿನ ಮೂಲವೇ ಮಾದಕವಸ್ತು ಕಳ್ಳಸಾಗಣೆ, ವಿಶೇಷವಾಗಿ ಫೆಂಟನಿಲ್ ಎಂಬ ಅಪಾಯಕಾರಿ ಡ್ರಗ್ ಎಂದು ದೋವಲ್ ಸಭೆಯಲ್ಲಿ ಬಹಿರಂಗಪಡಿಸಿದರು. ಈ ಡ್ರಗ್ ಹಣವನ್ನು ಭಾರತದ ವಿರುದ್ಧ ದ್ವೇಷ ಹರಡುವುದಕ್ಕೆ, ಉಗ್ರ ಚಟುವಟಿಕೆಗಳಿಗೆ ಮತ್ತು ವಲಸಿಗ ಭಾರತೀಯರನ್ನು ಬೆದರಿಸಿ ಹಣ ಸುಲಿಗೆ ಮಾಡಲು ಬಳಸಲಾಗುತ್ತಿದೆ ಎಂಬ ಅಂಶಗಳನ್ನು ಅವರು ಕೆನಡಾಕ್ಕೆ ಮನವರಿಕೆ ಮಾಡಿಕೊಟ್ಟರು. ಇದಕ್ಕೆ ಪ್ರತಿಯಾಗಿ, ವಲಸೆ ನಿಯಮಗಳಲ್ಲಿನ ಲೋಪದೋಷಗಳನ್ನು ಮುಚ್ಚಲು, ಡೇಟಾ ಹಂಚಿಕೆ ಮತ್ತು ಕಠಿಣ ತಪಾಸಣಾ ವ್ಯವಸ್ಥೆ ಜಾರಿಗೆ ತರಲು ಕೆನಡಾ ಒಪ್ಪಿದೆ. ಇನ್ನು ಮುಂದೆ ಭಯೋತ್ಪಾದಕ ಹಿನ್ನೆಲೆ ಇರುವವರು ಸುಲಭವಾಗಿ ಕೆನಡಾ ಪ್ರವೇಶಿಸಲು ಸಾಧ್ಯವಿಲ್ಲ.
ಆನ್‌ಲೈನ್ ದ್ವೇಷವೂ ದೊಡ್ಡ ಸಮಸ್ಯೆಯಾಗಿತ್ತು. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಖಲಿಸ್ತಾನಿ ಗುಂಪುಗಳು ನೇಮಕಾತಿ, ಹಣ ಸಂಗ್ರಹ ಮತ್ತು ದ್ವೇಷ ಪ್ರಚಾರ ಮಾಡುತ್ತಿವೆ. ಇದನ್ನು ತಡೆಯಲು ಸಂಯುಕ್ತ ಸೈಬರ್ ನೀತಿ ಜಾರಿಗೆ ಬರಲಿದೆ. ದ್ವೇಷ ಹರಡುವ ಮತ್ತು ಅಕ್ರಮ ಹಣ ಸಂಗ್ರಹಿಸುವ ಖಾತೆಗಳನ್ನು ನೇರವಾಗಿ ಕೆನಡಾದ ಪೊಲೀಸರು ಮುಚ್ಚಲಿದ್ದಾರೆ. ಇನ್ನು ರಾಜತಾಂತ್ರಿಕ ಮಟ್ಟದಲ್ಲಿಯೂ ಮಹತ್ವದ ಬೆಳವಣಿಗೆ ಎದುರಾಗಿದೆ. ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಮಾರ್ಚ್ ಮೊದಲ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಯುರೇನಿಯಂ, ಇಂಧನ, ನಿರ್ಣಾಯಕ ಖನಿಜಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಗಳು ಸಾಧ್ಯವಾಗುವ ನಿರೀಕ್ಷೆಯಿದೆ. ಈ ನಿಟ್ಟಿನಲ್ಲಿ ವ್ಯಾಪಾರ ಮತ್ತು ಭಯೋತ್ಪಾದನೆ ಒಟ್ಟಿಗೆ ಸಾಗಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.