ಬೆಂಗಳೂರು: ಈಗಾಗಲೇ ಒಂದರ ಮೇಲೊಂದು ವಿವಾದಗಳಲ್ಲಿ ಸಿಲುಕಿರುವ ಪಶ್ಚಿಮ ಬಂಗಾಳ ಸರ್ಕಾರಕ್ಕೆ, ಸುಪ್ರೀಂ ಕೋರ್ಟ್ ನಿಂದ ಮತ್ತೊಂದು ಶಾಕ್. ತುಟ್ಟಿ ಭತ್ಯೆ ಸಂಬಂಧಿಸಿದ ದೀರ್ಘಕಾಲದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಹಿಂದಿನ ತೀರ್ಪನ್ನು ಎತ್ತಿಹಿಡಿದು, ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಬಾಕಿ ಇರುವ ಡಿಎ ಅನ್ನು ಪಾವತಿಸಲೇಬೇಕೆಂದು ಸ್ಪಷ್ಟ ಆದೇಶ ನೀಡಿದೆ.
ಮಹತ್ವದ ತೀರ್ಪಿನಲ್ಲಿ, ಪಶ್ಚಿಮ ಬಂಗಾಳ ಸರ್ಕಾರವು ಸುಮಾರು 20 ಲಕ್ಷ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಡಿಎ ಬಾಕಿಯನ್ನು ತಡಮಾಡಲಾಗದು ಎಂದು ನ್ಯಾಯಾಲಯ ಹೇಳಿದೆ. ಈ ತೀರ್ಪು ರಾಜ್ಯದ ಸರ್ಕಾರಿ ನೌಕರರಿಗೆ ದೊಡ್ಡ ನಿರಾಳತೆಯನ್ನು ನೀಡಿದ್ದು, ಸರ್ಕಾರದ ಮೇಲೆ ಆರ್ಥಿಕ ಮತ್ತು ರಾಜಕೀಯ ಒತ್ತಡವನ್ನು ಹೆಚ್ಚಿಸಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ರಾಜ್ಯ ಸರ್ಕಾರವು ಬಾಕಿ ಇರುವ ಡಿಎಯ 25 ಶೇಕಡಾವನ್ನು ಹೋಳಿ ಹಬ್ಬದ ವೇಳೆಗೆ, ಅಂದರೆ ಮಾರ್ಚ್ 6ರೊಳಗೆ ಪಾವತಿಸಬೇಕು. ಉಳಿದ 75 ಶೇಕಡಾವನ್ನು ಹಂತ ಹಂತವಾಗಿ, ಕಂತುಗಳಲ್ಲಿ ಪಾವತಿಸಬೇಕೆಂದು ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದೆ. ಈ ಪ್ರಕರಣದ ಹಿನ್ನೆಲೆಗೆ ಹೋದರೆ, ಪಶ್ಚಿಮ ಬಂಗಾಳದ ಸರ್ಕಾರಿ ನೌಕರರು 2008ರಿಂದ 2019ರವರೆಗಿನ ಡಿಎ ಬಾಕಿ ಪಾವತಿಸದಿರುವುದರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಡಿಎಗೆ ಹೋಲಿಸಿದರೆ, ರಾಜ್ಯ ಸರ್ಕಾರಿ ನೌಕರರಿಗೆ ಕಡಿಮೆ ಪ್ರಮಾಣದ ಡಿಎ ನೀಡಲಾಗುತ್ತಿದೆ ಎಂಬುದು ಪ್ರಮುಖ ಅಸಮಾಧಾನದ ಕಾರಣವಾಗಿತ್ತು. ಬಿಜೆಪಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಉಪಕ್ರಮ ಮತ್ತು ಕಾನೂನು ಸಹಕಾರದಿಂದ ಈ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೆ ತಲುಪಿತ್ತು ಎಂಬುದೂ ಗಮನಾರ್ಹ ಅಂಶ. ಅವರ ಪ್ರಯತ್ನದಿಂದಲೇ ಈ ಪ್ರಕರಣಕ್ಕೆ ಹೊಸ ಚೈತನ್ಯ ಸಿಕ್ಕಿತು ಎಂದು ಸರ್ಕಾರಿ ನೌಕರರ ಸಂಘಟನೆಗಳು ಹೇಳುತ್ತಿವೆ.
ಸುಪ್ರೀಂ ಕೋರ್ಟ್ ತನ್ನ ಹಿಂದಿನ ಮಧ್ಯಂತರ ಆದೇಶವನ್ನು ಪುನರುಚ್ಚರಿಸುತ್ತಾ, ಡಿಎ ಪಾವತಿ ವಿಷಯದಲ್ಲಿ ರಾಜ್ಯ ಸರ್ಕಾರ ಯಾವುದೇ ವಿಳಂಬ ನೀತಿ ಅನುಸರಿಸಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ. ಜೊತೆಗೆ, ಡಿಎ ಬಾಕಿ ಪಾವತಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಪಾವತಿ ವೇಳಾಪಟ್ಟಿ ಮತ್ತು ಅನುಷ್ಠಾನವನ್ನು ಗಮನಿಸಲಿದೆ. ರಾಜ್ಯದಲ್ಲಿ ಈಗಾಗಲೇ ಆರ್ಥಿಕ ಸಂಕಷ್ಟ, ಕೇಂದ್ರ-ರಾಜ್ಯ ಸಂಘರ್ಷ, ಹಾಗೂ ಹಲವು ಆಡಳಿತಾತ್ಮಕ ವಿವಾದಗಳಿಂದ ಮಮತಾ ಸರ್ಕಾರ ಸಂಕಷ್ಟದಲ್ಲಿರುವ ಸಂದರ್ಭದಲ್ಲೇ ಈ ತೀರ್ಪು ಬಂದಿದೆ. ಹೀಗಾಗಿ, ಈ ಆದೇಶವು ಕೇವಲ ಕಾನೂನು ವಿಚಾರವಾಗಿಯೇ ಅಲ್ಲ, ರಾಜಕೀಯವಾಗಿ ಕೂಡ ಮಹತ್ವ ಪಡೆದುಕೊಂಡಿದೆ.