ನವದೆಹಲಿ : ಅಸ್ಸಾಂ ಮುಖ್ಯಮಂತ್ರಿ ಹೀಮಂತ ಬಿಸ್ವಾ ಶರ್ಮಾ ಅವರು ಗಾಂಧಿ ಪರಿವಾರದ ಕಟುಟೀಕಾಕಾರರಲ್ಲಿ ಪ್ರಮುಖರು. ಅವರು ಕಾಂಗ್ರೆಸ್ ವಿರುದ್ಧ ಟೀಕೆಗಳನ್ನು ಮಾಡುವುದಕ್ಕಿಂತಲೂ ಹೆಚ್ಚಾಗಿ, ಗಾಂಧಿ ಪರಿವಾರವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾರೆ. ಕಾಂಗ್ರೆಸ್ ಮೇಲಿನ ಗಾಂಧಿ ಪರಿವಾರದ ಹಿಡಿತವನ್ನು ಟೀಕಿಸುವ ಶರ್ಮಾ, ಇದೀಗ ಮತ್ತೊಂದು ಸ್ಪೋಟಕ ಆರೋಪವನ್ನು ಮಾಡಿದ್ದಾರೆ. ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಭಾಗವಹಿಸಿರುವ ಅಸ್ಸಾಂ ಮುಖ್ಯಮಂತ್ರಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಆರೋಪಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, "ನಾನು ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಭಿನ್ನಾಭಿಪ್ರಾಯದ ಮೊದಲ ಬಲಿಪಶು ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸದ್ಯಕ್ಕೆ ಅಸ್ಸಾಂ ಚುನಾವಣಾ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಆದರೆ ಹೀಮಂತ ಬಿಸ್ವಾ ಶರ್ಮಾ ಅವರು ಪ್ರಿಯಾಂಕಾ ಗಾಂಧಿ ಅವರ ಈ ನಿಯೋಜನೆಗೆ, ಕೇರಳ ವ್ಯವಹಾರಗಳಲ್ಲಿ ಅವರ ಹಸ್ತಕ್ಷೇಪ ಬಯಸದ ರಾಹುಲ್ ಗಾಂಧಿ ಅವರೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. "ಕೇರಳದಲ್ಲಿ ಪ್ರಿಯಾಂಕಾ ಗಾಂಧಿ ಅವರ ಉಪಸ್ಥಿತಿಯನ್ನು ರಾಹುಲ್ ಗಾಂಧಿ ಬಯಸುವುದಿಲ್ಲ. ನಾನು 22 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದೆ. ಹೀಗಾಗಿ ನನಗೂ ಕೆಲವು ಆಂತರಿಕ ಮಾಹಿತಿಗಳು ಗೊತ್ತಿವೆ. ಕೆ.ಸಿ. ವೇಣುಗೋಪಾಲ್ ಮತ್ತು ಅವರ ಗುಂಪಿನ ಹಿತಾಸಕ್ತಿ ಕಾಪಾಡುತ್ತಿರುವ ರಾಹುಲ್ ಗಾಂಧಿ, ಈ ಗುಂಪಿಗೆ ಹೊರಗಿನವರಾದ ಪ್ರಿಯಾಂಕಾ ಗಾಂಧಿ ಅವರನ್ನು ಅಸ್ಸಾಂಗೆ ವರ್ಗಾಯಿಸಿದ್ದಾರೆ" ಎಂದು ಅಸ್ಸಾಂ ಮುಖ್ಯಮಂತ್ರಿ ಅಂದಾಜಿಸಿದ್ದಾರೆ.
ಗಾಂಧಿ ಕುಟುಂಬವನ್ನು "ವಿಶ್ವದ ಅತಿದೊಡ್ಡ ವಿಫಲ ಕುಟುಂಬ" ಎಂದು ಕರೆದಿರುವ ಹೀಮಂತ ಬಿಸ್ವಾ ಶರ್ಮಾ, "ನನ್ನ ಕುಟುಂಬ ಅವರ ಕುಟುಂಬಕ್ಕಿಂತ ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಕಷ್ಟಪಡುತ್ತಾ ಬೆಳೆದಿದ್ದೇವೆ" ಎಂದು ಸೂಚ್ಯವಾಗಿ ಹೇಳಿದ್ದಾರೆ. ಈ ಹಿಂದೆ ಅಸ್ಸಾಂ ಸಿಎಂ, "ಕಾಂಗ್ರೆಸ್ ತನ್ನ ಕೈ ಚಿಹ್ನೆಯನ್ನು ಲುಂಗಿಗೆ ಬದಲಾಯಿಸಿಕೊಂಡರೆ ಉತ್ತಮ" ಎಂದು ಹೇಳಿಕೆ ನೀಡಿದ್ದರು. ಇದೇ ವೇಳೆ ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಅವರೊಂದಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಹೀಮಂತ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಗೊಗೊಯ್ ಮತ್ತು ಅವರ ಪತ್ನಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಈ ಹಿಂದೆ ಹೀಮಂತ ಬಿಸ್ವಾ ಶರ್ಮಾ ಗಂಭೀಋ ಆರೋಪ ಮಾಡಿದ್ದರು. ಅವರು ಈ ಹಿಂದೆ ಆರೋಪಿಸಿದ್ದರು. "ಶತ್ರು ದೇಶದ ಕಾರ್ಯತಂತ್ರ ಮತ್ತು ಅವರೊಂದಿಗೆ ಕೈಜೋಡಿಸಿರುವವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸುವುದು ನಮ್ಮ ಸರ್ಕಾರದ ಕತ್ಯವ್ಯ" ಎಂಧು ಹೇಳುವ ಮೂಲಕ, ಹೀಮಂತ ಬಿಸ್ವಾ ಶರ್ಮಾ ತಮ್ಮ ಆರೋಪಗಳನ್ನು ಸಮರ್ಥಿಸಿಕೊಂಡಿದ್ದಾರೆ.