ನವದೆಹಲಿ: ವೆನಿಜುವೆಲಾ ರಾಜಧಾನಿ ಮೇಲೆ ದಾಳಿ ಮಾಡಿ, ಅಲ್ಲಿನ ಅಧ್ಯಕ್ಷನನ್ನು ಹೊತ್ತೊಯ್ದ ಘಟನೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೆನಿಜುವೆಲಾದ ಘಟನೆ ಜಗತ್ತಿಗೆ ಒಳ್ಳೆಯದಲ್ಲ. ಅಮೆರಿಕಾ ಅಧ್ಯಕ್ಷ ಟ್ರಂಪ್ ವಿಶ್ವದ ಜನರನ್ನು ಹೆದರಿಸಲು ನೋಡ್ತಿದ್ದಾನೆ. ಆದರೆ ಜಗತ್ತು ಅವರ ಮುಂದೆ ಮಂಡಿಯೂರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ವಿಸ್ತರಿಸಲು ಬಯಸುವವರು ಹೆಚ್ಚು ಕಾಲ ಉಳಿಯಲ್ಲ. ಹಿಟ್ಲರ್, ಮುಸಲೋನಿ ಅಂಥವರೇ ಪ್ರಯತ್ನ ಮಾಡಿ ಕಣ್ಮರೆಯಾಗಿ ಹೋಗಿದ್ದಾರೆ. ಕೆಲವರು ತಮ್ಮ ದುಷ್ಟ ವಿಚಾರಗಳಿಂದ ವಿಶ್ವದ ಶಾಂತಿ ಹಾಳು ಮಾಡಬಾರದು. ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಸ್ಥಾಪಿಸುವಲ್ಲಿ ತಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಟ್ರಂಪ್ ಸುಮಾರು 70 ಬಾರಿ ಹೇಳಿದ್ದಾರೆ ಎಂದಿದ್ದಾರೆ. ಟ್ರಂಪ್ ತಾವೇ ಜಗತ್ತಿನ ಶ್ರೇಷ್ಠ ವ್ಯಕ್ತಿ ಎಂದು, ಜಗತ್ತು ಅವರ ಮುಂದೆ ಮಂಡಿಯೂರುತ್ತದೆ ಎಂದು ತಿಳಿದಿದ್ದಾರೆ. ಆದರೆ ಜಗತ್ತು ಟ್ರಂಪ್ ಮುಂದೆ ಮಂಡಿಯೂರುವ ಅಗತ್ಯವಿಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ, ಅದರಲ್ಲೇ ಮುಂದುವರೆಯುತ್ತೇವೆ. 'ಬದುಕಿ ಬದುಕಲು ಬಿಡಿ' ಎಂಬುದು ನೆಹರೂ ಅವರ ನೀತಿಯಾಗಿತ್ತು ಮತ್ತು ಅದು ನಮ್ಮ ನೀತಿಯೂ ಆಗಿದೆ ಎಂದು ಹೇಳಿದ್ದಾರೆ.
ಮೋದಿ ಕುರಿತಾದ ಟ್ರಂಪ್ ಅವರ ಆಡಿಯೋ ಬಗ್ಗೆ ಮಾತನಾಡಿದ ಖರ್ಗೆ, ಆಡಿಯೋವನ್ನು ನಾನು ಕೇಳಿಸಿಕೊಂಡಿದ್ದೇನೆ. ಮೋದಿ ನನ್ನನ್ನು ಗೌರವಿಸುತ್ತಾರೆ, ನನ್ನ ಮಾತನ್ನು ಕೇಳುತ್ತಾರೆ ಎಂದಿದ್ದಾರೆ. ಇದರರ್ಥ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್ ಅವರ ನಿಯಂತ್ರಣದಲ್ಲಿದ್ದಾರೆಯೇ? ಅವರು ಯಾಕೆ ತಲೆ ಬಾಗುತ್ತಿದ್ದಾರೆಂದು ನಮಗೆ ಅರ್ಥವಾಗುತ್ತಿಲ್ಲ. ಇದು ದೇಶದ ಸಾರ್ವಭೌಮತ್ವಕ್ಕೆ ಅಪಾಯಕಾರಿ. ಟ್ರಂಪ್ ಮಾತನ್ನು ಕೇಳಲು ದೇಶದ ಜನ ಪ್ರಧಾನಿಯನ್ನಾಗಿ ಮೋದಿಯನ್ನು ಮಾಡಿಲ್ಲ. ದೇಶವನ್ನು ನಡೆಸಲು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.