ಕೋಲ್ಕತಾ: ವಿಧಾನಸಭಾ ಚುನಾವಣೆಗಾಗಿ ರಣತಂತ್ರ ರೂಪಿಸಲು ಪಶ್ಚಿಮಬಂಗಾಳ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಲ್ಟ್ ಲೇಕ್ನಲ್ಲಿರುವ ಹೋಟೆಲ್ನಲ್ಲಿ ಬಿಜೆಪಿಯ ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಇದೆ ವೇಳೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರನ್ನು ಕರೆದಿರುವುದು ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. ಕಳೆದ ಹಲವು ತಿಂಗಳುಗಳಿಂದ ರಾಜ್ಯದಲ್ಲಿ ಬಿಜೆಪಿಯ ಮುಂಚೂಣಿಯ ಚಟುವಟಿಕೆಗಳಿಂದ ದೂರ ಉಳಿದಿದ್ದ ದಿಲೀಪ್ ಘೋಷ್ ಅವರನ್ನು ಪಕ್ಷದ ಸಂಸದರು, ಶಾಸಕರು, ನಾಗರಿಕ ಮಂಡಳಿ ಸದಸ್ಯರು ಮತ್ತು ಸಂಘಟನಾ ಖಾತೆ ಹೊಂದಿರುವವರು ಭಾಗವಹಿಸಿದ್ದ ಮುಚ್ಚಿದ ಬಾಗಿಲಿನ ಸಭೆಗೆ ಆಹ್ವಾನಿಸಲಾಗಿತ್ತು. ಹಾಲಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಮತ್ತು ರಾಜ್ಯದ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಕೂಡ ಮಹತ್ವದ ಸಭೆಯಲ್ಲಿ ಉಪಸ್ಥಿತರಿದ್ದರು. ಮುಂಬರುವ ನಿರ್ಣಾಯಕ ಚುನಾವಣೆಗೆ ಬಿಜೆಪಿಯ ಮುಖ್ಯ ಚುನಾವಣಾ ತಂತ್ರಜ್ಞ ಎಂದು ಪರಿಗಣಿಸಲಾದ ಶಾ ಅವರು ಆಹ್ವಾನಿತರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಪ್ರಚಾರದ ಮಾರ್ಗಸೂಚಿಯ ಬಗ್ಗೆ ಪ್ರಮುಖ ನಾಯಕರ ಸಲಹೆಗಳನ್ನು ಕೇಳಲು ಮತ್ತು ಅವರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ದಿಘಾ ಜಗನ್ನಾಥ ದೇವಾಲಯ ಸಂಕೀರ್ಣ ಉದ್ಘಾಟನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದಿಲೀಪ್ ಘೋಷ್ ಭೇಟಿಯಾದ ದೃಶ್ಯಗಳು ಟಿವಿ ಮತ್ತು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾದ ನಂತರ ಮಹತ್ವದ ಸಭೆ ನಡೆದಿದೆ. ಘೋಷ್ ಅವರನ್ನು ಪಕ್ಷದಲ್ಲಿ ಹಿಂಬದಿ ಬೆಂಚಿಗೆ ತಳ್ಳಲಾಗಿದೆ ಎಂದು ಹೇಳಲಾಗಿತ್ತು. ಮುಂದಿನ ತಿಂಗಳುಗಳಲ್ಲಿ 61 ರ ಹರೆಯದ ಘೋಷ್ ಅವರು ಬಿಜೆಪಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಫೈರ್ಬ್ರಾಂಡ್ ನಾಯಕ ದಿಲೀಪ್ ಘೋಷ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ವಿಧಾನಸಭೆಯಲ್ಲಿ ಮೂರು ಸ್ಥಾನಗಳಿಂದ 70 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು.2019 ರ ಲೋಕಸಭಾ ಚುನಾವಣೆಯಲ್ಲಿ 18 ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಪಕ್ಷ ಈಗ ಘೋಷ್ ಅವರ ಆಕ್ರಮಣಕಾರಿ ಪ್ರಚಾರ ಶೈಲಿಯನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸಲು ಯೋಜಿಸಿದೆ ಎನ್ನಲಾಗಿದೆ. ಪಕ್ಷದ ಪ್ರತಿನಿಧಿಗಳ ಸಭೆಯ ನಂತರ, ಶಾ ಅವರು ನಗರದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೆಹಲಿಗೆ ತೆರಳುವ ಮೊದಲು ಮಧ್ಯ ಕೋಲ್ಕತಾದಲ್ಲಿರುವ ಥಂಟಾನಿಯಾ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. 294 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 2016 ರಲ್ಲಿ ಕೇವಲ 3 ಸ್ಥಾನಗಳನ್ನು(10.16%ಮತಗಳಿಕೆ) ಗೆದ್ದಿತ್ತು.2019 ಲೋಕಸಭಾ ಚುನಾವಣೆಯಲ್ಲಿ 40.7% ಶೇಕಡಾ ಮತ ಪಡೆದಿತ್ತು.2021 ರ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವ ತೃಣಮೂಲ ಕಾಂಗ್ರೆಸ್ 216 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದ ಸರಕಾರ ರಚಿಸಿತು. ಬಿಜೆಪಿ ನಿಕಟ ಸ್ಪರ್ಧೆ ನೀಡುವ ಲೆಕ್ಕಾಚಾರ ಹಾಕಿದ್ದರೂ 77 ಸ್ಥಾನಗಳೊಂದಿಗೆ ಅಧಿಕೃತ ವಿಪಕ್ಷವಾಯಿತು.ಬಂಗಾಳದ ಇತಿಹಾಸದಲ್ಲಿ ಮೊದಲ ಬಾರಿಗೆ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳಿಂದ ಯಾವುದೇ ಸದಸ್ಯರು ವಿಧಾನಸಭೆಗೆ ಆಯ್ಕೆಯಾಗಲಿಲ್ಲ.