ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ವಿವಿಧ ದೇಶಗಳ ಮುಖ್ಯ ನ್ಯಾಯಾಧೀಶರು ಮತ್ತು ಹಿರಿಯ ನ್ಯಾಯಾಧೀಶರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಗಣ್ಯರನ್ನು ಭಾರತದ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಸ್ವಾಗತಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.
ಈ ಸಂದರ್ಭದಲ್ಲಿ, ವಿದೇಶಿ ನ್ಯಾಯಾಧೀಶರು ಭಾರತದ ಮುಖ್ಯ ನ್ಯಾಯಾಧೀಶ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಜೊತೆಗೆ ಕುಳಿತು ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ಕಲಾಪಗಳನ್ನು ವೀಕ್ಷಿಸಿದರು. ಉಪಸ್ಥಿತರಿದ್ದ ವಿದೇಶಿ ಗಣ್ಯರಲ್ಲಿ ಭೂತಾನ್ ಮುಖ್ಯ ನ್ಯಾಯಾಧೀಶ ಲ್ಯೊನ್‌ಪೊ ನೊರ್ಬು ಶೆರಿಂಗ್, ಕೆನ್ಯದ ಮುಖ್ಯ ನ್ಯಾಯಾಧೀಶೆ ಮಾರ್ತಾ ಕೆ. ಕೂಮೆ, ಮಾರಿಶಸ್ ನ ಮುಖ್ಯ ನ್ಯಾಯಾಧೀಶೆ ರೆಹಾನಾ ಬೀಬಿ ಮುಂಗ್ಲಿ-ಗುಲ್‌ಬುಲ್ ಮತ್ತು ಶ್ರೀಲಂಕಾದ ಮುಖ್ಯ ನ್ಯಾಯಾಧೀಶ ಪ್ರೀತಿ ಪದ್ಮನ್ ಸೂರಸೇನ ಸೇರಿದ್ದಾರೆ. ಕಿನ್ಯ, ನೇಪಾಳ, ಶ್ರೀಲಂಕಾ ಮತ್ತು ಮಲೇಶ್ಯದ ಸರ್ವೋಚ್ಛ ನ್ಯಾಯಾಲಯಗಳ ಇತರ ಹಿರಿಯ ನ್ಯಾಯಾಧೀಶರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಕೇಶ್ ದ್ವಿವೇದಿ ಮುಂತಾದವರೂ ಈ ಸಂದರ್ಭದಲ್ಲಿ ಮಾತನಾಡಿದರು. 1949ರಲ್ಲಿ ಭಾರತದ ಸಂವಿಧಾನಕ್ಕೆ ನೀಡಲಾದ ಅಂಗೀಕಾರವನ್ನು ಸ್ಮರಿಸುವುದಕ್ಕಾಗಿ ಪ್ರತಿ ವರ್ಷ ನವೆಂಬರ್ 26ರಂದು ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನವನ್ನು ಆಚರಿಸಲಾಗುತ್ತಿದೆ.