ನವದೆಹಲಿ : ಸೇನಾ ಯಂತ್ರೋಪಕರಣಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ(CDS)ಜನರಲ್ ಅನಿಲ್ ಚೌಹಾಣ್ (CDS Anil Chauhan) ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಸೇನೆಗೆ ನೀಡುವ ಯುದ್ಧ ಉಪರಕಣಗಳಲ್ಲಿ ನಿಮ್ಮ ಲಾಭದ ಜತೆಗೆ ರಾಷ್ಟ್ರೀಯತೆ ಹಾಗೂ ದೇಶ ಪ್ರೇಮ ಕೂಡ ಇರಲಿ. ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳು ಶೇ 70ರಷ್ಟು ದೇಶೀ ನಿರ್ಮಿತ ಎಂದು ಹೇಳಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ ಅದು ನಿಜವಾಗಿರುವುದಿಲ್ಲ. ರಕ್ಷಣೆ ಇಲಾಖೆಗೆ ನೀಡುವ ಯುದ್ಧ ಸಲಕರಣೆಗಳು ದೇಶಿಯವಾಗಿರಲಿ ಎಂಬುದು ನಮ್ಮ ನಿರೀಕ್ಷೆ ಎಂದು ಹೇಳಿದ್ದಾರೆ.
ಇನ್ನು ಇಪಿಯ (ತುರ್ತು ಸೇನಾ ಯಂತ್ರೋಪಕರಣ ಖರೀದಿ) ಬಗ್ಗೆಯೂ ಅವರು ಅಸಮಾಧನ ಹೊರ ಹಾಕಿದ್ದರು. ಐದನೇ ಮತ್ತು ಆರನೇ ಇಪಿ ಸಮಯದಲ್ಲಿ ಹಲವು ಲೋಪಗಳನ್ನು ಸೇನೆ ಪತ್ತೆ ಮಾಡಿದೆ. ಇದರಿಂದ ಸೇನೆಯ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಉಂಟು ಮಾಡಿದೆ. ಉಪಕರಣಗಳನ್ನು ನೀಡುವಾಗ ಕಂಪನಿಗಳು ಅತಿಯಾಗಿ ಭರವಸೆ ನೀಡಿದೆ. ಆದರೆ ಆ ಯಾವ ಭರವಸೆಯನ್ನು ಸರಿಯಾಗಿ ಪೊರೈಸಿಲ್ಲ. ಇನ್ನು ನಾವು ಕೇಳಿದ ಸಮಯಕ್ಕೆ ಯುದ್ಧ ಸಾಮಾಗ್ರಿಗಳನ್ನು ನೀಡಲು ಕಂಪನಿಗಳು ವಿಫಲವಾಗಿರುವುದನ್ನು ಕೂಡ ನೋಡಿದ್ದೇನೆ. ಸಮಯದ ಚೌಕಟ್ಟಿನೊಳಗೆ ಕೆಲಸ ಮಾಡಲು ಕಲಿಯಿರಿ ಎಂದು ಖಾರವಾಗಿ ಹೇಳಿದರು. ಇಪಿ ಎಂದರೆ ತುರ್ತು ಸೇನಾ ಯಂತ್ರೋಪಕರಣ ಖರೀದಿಗೆ ಸೇನೆಗೆ ಇರುವ ಪರಮಾಧಿಕಾರ. ಈ ಮೂಲಕ ಸೇನೆಗೆ ತುರ್ತು ಅಗತ್ಯ ಇರುವ ಯುದ್ಧ ಉಪಕರಣಗಳನ್ನುರಕ್ಷಣಾ ಸಚಿವಾಲಯದ ಅನುಮೋದನೆ ಇಲ್ಲದೆ ಮತ್ತು ಇತರ ಯಾವುದೇ ದೀರ್ಘಾವಧಿಯ ಖರೀದಿ ಪ್ರಕ್ರಿಯೆಗಳನ್ನು ಅನುಸರಿಸದೆ ಖರೀದಿ ಮಾಡಬಹುದು. ತುರ್ತು ಸೇನಾ ಯಂತ್ರೋಪಕರಣ ಖರೀದಿ ಅಡಿ ಸುಮಾರು 300 ಕೋಟಿ ರೂ.ಗಳವರೆಗಿನ ಒಪ್ಪಂದಗಳನ್ನು ಮಾಡಿಕೊಳ್ಳಲು ಸೇನೆಗೆ ಅವಕಾಶ ಇದೆ ಎಂದು ಜನರಲ್ ಅನಿಲ್ ಚೌಹಾಣ್ ಹೇಳಿದ್ದಾರೆ.