ಬೆಂಗಳೂರು : ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಇಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಗಳಾದ ಪಿಯೂಶ್ ಗೋಯೆಲ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಎಚ್.ಡಿ ಕುಮಾರಸ್ವಾಮಿ ಅವರು ಪಿಯೂಶ್ ಗೋಯೆಲ್ ಅವರಿಗೆ ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡ ಸುವಿಶಾಲವಾದ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP) ಅನುಷ್ಠಾನ ಮಾಡಬೇಕೆಂದು ಕೋರಿ ಮನವಿಯನ್ನು ಸಲ್ಲಿಸಿದ್ದಾರೆ. ಕೈಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯಾದ್ಯಂತ ಸೂಕ್ತ ಕೈಗಾರಿಕಾ ಕಾರಿಡಾರ್ ಯೋಜನೆಯ ಚೌಕಟ್ಟಿನ ಅಡಿಯಲ್ಲಿ ಕೈಗಾರಿಕಾ ಪಾರ್ಕ್ಗಳನ್ನು ಸ್ಥಾಪಿಸುವ ಕುರಿತು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಅವರೊಂದಿಗೆ ಎಚ್.ಡಿ. ಕುಮಾರಸ್ವಾಮಿ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂಕಲ್ಪದಂತೆಯೇ ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆಯನ್ನು ಬಲಪಡಿಸಿ ಉತ್ತೇಜಿಸಲು, ಸಾಗಾಣಿಕೆಯ ಮೂಲಸೌಕರ್ಯವನ್ನು ಅಧಿಕವಾಗಿ ಅಭಿವೃದ್ಧಿಪಡಿಸಲು ಹಾಗೂ ಕರ್ನಾಟಕದ ಉದ್ದಗಲಕ್ಕೂ ಬೃಹತ್ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಈ ಯೋಜನೆಯು ಬಹುದೊಡ್ಡ ಮಟ್ಟದಲ್ಲಿ ಕೊಡುಗೆ ನೀಡುತ್ತದೆ ಎಂಬ ಅಂಶವನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸಚಿವ ಪಿಯೂಶ್ ಗೋಯಲ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಸಾಗಾಣಿಕೆ ಸುಲಭವಾಗಿ ಕೈಗಾರಿಕಾಭಿವೃದ್ಧಿ ವೇಗಗತಿಯಲ್ಲಿ ಸಾಗುತ್ತದೆ. ಉದ್ದೇಶಿತ ಜಿಲ್ಲೆಗಳಲ್ಲಿ ಯೋಜನೆ ಬಂದರೆ ಇಡೀ ರಾಜ್ಯಕ್ಕೆ ಸಮಗ್ರವಾಗಿ ಅನುಕೂಲ ಆಗುತ್ತದೆ. ಮುಖ್ಯವಾಗಿ ಈ ಪ್ರದೇಶಗಳು ಸಾಮೂಹಿಕವಾಗಿ ದೊಡ್ಡ ಮಟ್ಟದಲ್ಲಿ ಕೈಗಾರಿಕಾ ಅಭಿವೃದ್ಧಿ ಕಾಣುವುದಲ್ಲದೆ, ಸಮತೋಲಿತ ಪ್ರಾದೇಶಿಕ ಬೆಳವಣಿಗೆಗೆ ಕಾಣಿಕೆ ನೀಡುತ್ತವೆ ಎಂದು ಕುಮಾರಸ್ವಾಮಿ ಚರ್ಚೆಯ ವೇಳೆ ಒತ್ತಿ ಹೇಳಿದರು.
ಈ ಪ್ರಸ್ತಾವಿತ ಕೈಗಾರಿಕಾ ಪಾರ್ಕುಗಳನ್ನು ಸೂಕ್ತವಾದ ಕೈಗಾರಿಕಾ ಕಾರಿಡಾರ್ ಇಲ್ಲವೇ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP) ಚೌಕಟ್ಟಿನ ಅಡಿಯಲ್ಲಿ ಪರಿಗಣಿಸಬೇಕೆಂದು ವಿನಂತಿಸಿದ ಕುಮಾರಸ್ವಾಮಿ ಅವರು; ಈ ಜಿಲ್ಲೆಗಳನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ಗಳಿಗೆ ಸಂಯೋಜಿಸುವ ಮೂಲಕ ಕರ್ನಾಟಕವು ಉದ್ಯೋಗ ಸೃಷ್ಟಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲು ಅನುಕೂಲವಾಗುತ್ತದೆ. ಅಲ್ಲದೆ, ಸಾಕಾಣಿಗೆ ಸುಲಭವಾಗಿ ಖಾಸಗಿ ಬಂಡವಾಳ ಹೂಡಿಕೆಯಲ್ಲೂ ಗಮನಾರ್ಹ ಪ್ರಗತಿ ಸಾಧಿಸಲಿದೆ ಎಂದು ಉಕ್ಕು ಸಚಿವರು ಗೋಯಲ್ ಅವರಿಗೆ ವಿವರಿಸಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಎಚ್ಡಿ ಕುಮಾರಸ್ವಾಮಿ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕರ್ನಾಟಕ ರಾಜ್ಯದ ಕೈಗಾರಿಕಾಭಿವೃದ್ಧಿಯಲ್ಲಿ ಕೈಜೋಡಿಸುವುದಾಗಿ ಭರವಸೆ ನೀಡಿದ್ದಾರೆ.