ನವದೆಹಲಿ: ಐತಿಹಾಸಿಕ ಕೆಂಪುಕೋಟೆ ಬಳಿಯ ಕಾರು ಸ್ಫೋಟ ಘಟನೆಯಿಂದ ರಾಷ್ಟ್ರ ರಾಜಧಾನಿ ಜನರಲ್ಲಿ ಭೀತಿ ಆವರಿಸಿದ್ದು, ಪ್ರತಿದಿನ ಭಯದಲ್ಲಿಯೇ ಬದುಕು ಸಾಗಿಸುವಂತಾಗಿದೆ. ದೆಹಲಿಯ ಮಹಿಪಾಲ್‌ಪುರ ಪ್ರದೇಶದಲ್ಲಿ ಬಸ್ ಟೈರ್ ಸ್ಫೋಟದಿಂದ ಉಂಟಾದ ಪ್ರಬಲ ಶಬ್ದಕ್ಕೆ ಜನತೆ ಬೆಚ್ಚಿ ಬಿದ್ದಿದ್ದಾರೆ. ಮಹಿಪಾಲ್‌ಪುರದ ರಾಡಿಸನ್ ಹೋಟೆಲ್ ಬಳಿ ಬೆಳಿಗ್ಗೆ 9.19 ಕ್ಕೆ ಸ್ಫೋಟದಂತಹ ದೊಡ್ಡ ಶಬ್ದ ಕೇಳಿಬಂದಿದೆ. ತದ ನಂತರ ದೆಹಲಿ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ತಿಳಿಸಲಾಗಿದ್ದು, ಮೂರು ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆದರೆ ಸ್ಥಳದಲ್ಲಿ ಏನೂ ಸಿಗಲಿಲ್ಲ. ಕರೆ ಮಾಡಿದವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಅಮಿತ್ ಗೋಯಲ್ ಎಂದು ಹೇಳಿದರು. ಗುರುಗ್ರಾಮ್‌ಗೆ ಹೋಗುತ್ತಿದ್ದಾಗ ದೊಡ್ಡ ಶಬ್ದ ಕೇಳಿಸಿತು ಎಂದು ಕರೆಮಾಡಿದಾತ ಹೇಳಿದ್ದಾನೆ. ಎಲ್ಲವನ್ನೂ ಪರಿಶೀಲಿಸಿದ್ದೇವೆ. ಆದರೆ ಏನೂ ಪತ್ತೆಯಾಗಿಲ್ಲ. ಸ್ಥಳೀಯರ ವಿಚಾರಣೆಯ ಸಮಯದಲ್ಲಿ, ಧೌಲಾ ಕುವಾನ್ ಕಡೆಗೆ ಹೋಗುತ್ತಿದ್ದ DTC ಬಸ್‌ನ ಹಿಂಭಾಗದ ಟೈರ್ ಸಿಡಿದಿದ್ದು, ಅದರಿಂದ ಶಬ್ದ ಬಂದಿದೆ ಎಂದು ಸಿಬ್ಬಂದಿಯೊಬ್ಬರು ನಮಗೆ ಮಾಹಿತಿ ನೀಡಿದರು ಎಂದು ಡಿಸಿಪಿ ಹೇಳಿದರು. ಪರಿಸ್ಥಿತಿ ಸಾಮಾನ್ಯವಾಗಿದ್ದು, ಆತಂಕಪಡಬೇಕಾಗಿಲ್ಲ ಎಂದು ಅವರು ಹೇಳಿದರು.