ತಿರುಪತಿ : ಉತ್ತರಾಖಂಡ ಮೂಲದ ಡೈರಿಯೊಂದು ಎಲ್ಲಿಂದಲೂ ಒಂದು ಹನಿ ಹಾಲು, ಬೆಣ್ಣೆಯನ್ನು ಖರೀದಿಸದೆ ತಿರುಪತಿಗೆ ಕಳೆದ ಐದು ವರ್ಷಗಳಿಂದ ತುಪ್ಪ(Ghee) ಪೂರೈಸಿರುವ ಕುರಿತು ಹಲವು ಪ್ರಶ್ನೆಗಳೆದ್ದಿವೆ. 2019 ಮತ್ತು 2024 ರ ನಡುವೆ, ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ದೇವಸ್ಥಾನವನ್ನು ನಡೆಸುತ್ತಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ 250 ಕೋಟಿ ರೂ. ಮೌಲ್ಯದ 68 ಲಕ್ಷ ಕಿಲೋಗ್ರಾಂಗಳಷ್ಟು ತುಪ್ಪವನ್ನು ಪೂರೈಸುವಲ್ಲಿ ಯಶಸ್ವಿಯಾಗಿತ್ತು. ತಿರುಪತಿ ಲಡ್ಡು ತುಪ್ಪದ ಕಲಬೆರಕೆಯ ಕುರಿತಾದ ಸಿಬಿಐ ತನಿಖೆಯಲ್ಲಿ ಇದು ಬಹಿರಂಗವಾಗಿದೆ. ಈ ಡೈರಿ ಹೆಸರು ಭೋಲೆ ಬಾಬಾ, ಆರೋಪಿ ಅಜಯ್ ಕುಮಾರ್ ಸುಗಂಧ್ ಬಂಧನದ ನಂತರ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ಆಘಾತಕಾರಿ ವಿವರಗಳನ್ನು ಸಂಗ್ರಹಿಸಿದೆ. ಸುಗಂಧ್ ಭೋಲೆ ಬಾಬಾ ಆರ್ಗಾನಿಕ್ ಡೈರಿಗೆ ಮೊನೊಡಿಗ್ಲಿಸರೈಡ್‌ಗಳು ಮತ್ತು ಅಸಿಟಿಕ್ ಆಸಿಡ್ ಎಸ್ಟರ್‌ನಂತಹ ವಿವಿಧ ರಾಸಾಯನಿಕಗಳನ್ನು ಪೂರೈಸಿದ್ದರು. ತಿರುಪತಿ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪವನ್ನು ಪೂರೈಸುವ ಒಪ್ಪಂದವನ್ನು ಟಿಟಿಡಿ ಭೋಲೆ ಬಾಬಾ ಆರ್ಗಾನಿಕ್ ಡೈರಿಗೆ ನೀಡಿತ್ತು. ನೆಲ್ಲೂರು ನ್ಯಾಯಾಲಯಕ್ಕೆ ಸಲ್ಲಿಸಿದ ತನ್ನ ರಿಮಾಂಡ್ ವರದಿಯಲ್ಲಿ ಎಸ್‌ಐಟಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಉತ್ತರಾಖಂಡದ ಭಗವಾನ್‌ಪುರದಲ್ಲಿ ಡೈರಿಯ ಪ್ರವರ್ತಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್ ನಿರ್ವಹಿಸುತ್ತಿದ್ದಾರೆ. ಸಿಬಿಐ ಪ್ರಕಾರ, ಡೈರಿ ನಕಲಿ ದೇಸಿ ತುಪ್ಪ ಉತ್ಪಾದನಾ ಘಟಕವನ್ನು ಸ್ಥಾಪಿಸಿ ಹಾಲು ಸಂಗ್ರಹಣೆ ಮತ್ತು ಪಾವತಿ ದಾಖಲೆಗಳನ್ನು ಸುಳ್ಳು ಮಾಡಿದ್ದಾರೆ. ಭೋಲೆ ಬಾಬಾ ಡೈರಿಯನ್ನು 2022 ರಲ್ಲಿ ಅನರ್ಹಗೊಳಿಸಲಾಯಿತು ಮತ್ತು ಕಪ್ಪುಪಟ್ಟಿಗೆ ಸೇರಿಸಲಾಯಿತು, ಆದರೂ ಅವರು ತಿರುಪತಿ ಮೂಲದ ವೈಷ್ಣವಿ ಡೈರಿ, ಉತ್ತರ ಪ್ರದೇಶ ಮೂಲದ ಮಾಲ್ ಗಂಗಾ ಮತ್ತು ತಮಿಳುನಾಡು ಮೂಲದ ಎಆರ್ ಡೈರಿ ಫುಡ್ಸ್ ಸೇರಿದಂತೆ ಇತರ ಡೈರಿಗಳ ಮೂಲಕ ಒಪ್ಪಂದಗಳಿಗೆ ಯಶಸ್ವಿಯಾಗಿ ಬಿಡ್ ಮಾಡುವ ಮೂಲಕ ಟಿಟಿಡಿಗೆ ನಕಲಿ ತುಪ್ಪವನ್ನು ಪೂರೈಸುವುದನ್ನು ಮುಂದುವರೆಸಿತ್ತು. ಸಿಬಿಐ ತನಿಖೆಯಲ್ಲಿ, ಎಆರ್ ಡೈರಿಯು ಕಳೆದ ವರ್ಷ ಜುಲೈನಲ್ಲಿ ಭೋಲೆ ಬಾಬಾ ಡೈರಿ ಪ್ರವರ್ತಕರ ಪರವಾಗಿ ವೈಷ್ಣವಿ ಡೈರಿಯ ಮೂಲಕ ತಿರುಪತಿ ಟ್ರಸ್ಟ್‌ಗೆ ಪ್ರಾಣಿಗಳ ಕೊಬ್ಬನ್ನು ಹೊಂದಿರುವ ತುಪ್ಪವನ್ನು ಪೂರೈಸಿದೆ ಮತ್ತು ಮರುಮಾರಾಟ ಮಾಡಿದೆ ಎಂದು ತಿಳಿದುಬಂದಿದೆ. ತನಿಖೆಯ ಸಮಯದಲ್ಲಿ, ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಮತ್ತು ಎಸ್‌ಐಟಿ ತಂಡವು ದಿಂಡಿಗಲ್‌ನಲ್ಲಿರುವ ಎಆರ್ ಡೈರಿ ಸ್ಥಾವರವನ್ನು ಪರಿಶೀಲಿಸಿದಾಗ, ನಾಲ್ಕು ತುಪ್ಪ ಟ್ಯಾಂಕರ್‌ಗಳು ಎಆರ್ ಡೈರಿಗೆ ಹಿಂದಿರುಗಲಿಲ್ಲ. ಬದಲಿಗೆ ವೈಷ್ಣವಿ ಡೈರಿ ಸ್ಥಾವರದ ಬಳಿ ಇರುವ ಸ್ಥಳೀಯ ಕಲ್ಲು ಪುಡಿಮಾಡುವ ಘಟಕಕ್ಕೆ ಕಳುಹಿಸಲ್ಪಟ್ಟವು ಎಂಬುದು ತಿಳಿದುಬಂದಿತ್ತು.