image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಿದ್ಯಾರ್ಥಿಗಳಿಂದ ಆರ್‌ಎಸ್‌ಎಸ್ ಗೀತೆ : ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಿದ್ಯಾರ್ಥಿಗಳಿಂದ ಆರ್‌ಎಸ್‌ಎಸ್ ಗೀತೆ : ತನಿಖೆಗೆ ಆದೇಶಿಸಿದ ಕೇರಳ ಸರ್ಕಾರ

ತಿರುವನಂತಪುರ: ಕೇರಳದ ಎರ್ನಾಕುಲಂನಿಂದ ಬೆಂಗಳೂರಿಗೆ ಹೊಸದಾಗಿ ಉದ್ಘಾಟನೆಯಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಗೀತೆ ಹಾಡಿರುವ ವೀಡಿಯೋವೊಂದು ವೈರಲ್ ಆಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಂದು ಕೇರಳ ಸರ್ಕಾರ ತನಿಖೆ ಆದೇಶಿಸಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇರಳದ ಸಾರ್ವಜನಿಕ ಶಿಕ್ಷಣ ಸಚಿವ ವಿ ಶಿವಕುಟ್ಟಿ ಅವರು ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸಚಿವ ಶಿವಕುಟ್ಟಿ ಕಚೇರಿಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದ್ದು, ಈ ವಿಚಾರವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಉಲ್ಲೇಖಿಸಲಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ರಾಜಕೀಯಗೊಳಿಸುವುದು ಮತ್ತು ಯಾವುದೇ ನಿರ್ದಿಷ್ಟ ಗುಂಪಿನ ಕೋಮು ಕಾರ್ಯಸೂಚಿಯನ್ನು ಉತ್ತೇಜಿಸಲು ಅವರನ್ನು ಬಳಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಹೀಗಾಗಿ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ (ಡಿಪಿಐ) ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಅಧಿಕೃತ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡುವಲ್ಲಿ ಯಾವುದೇ ಲೋಪವಾಗಿದೆಯೇ ಎಂಬುದನ್ನು ತನಿಖೆಯು ಪರಿಶೀಲಿಸುತ್ತದೆ. ವರದಿಯಲ್ಲಿನ ಅಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ದೇಶದ ಜಾತ್ಯತೀತ ಮತ್ತು ರಾಷ್ಟ್ರೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಜವಾಬ್ದಾರಿ ಸರ್ಕಾರದ್ದು, ಈ ತತ್ವಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಶಿವನ್‌ಕುಟ್ಟಿ ಹೇಳಿದ್ದಾರೆ. ಆದರೆ ಹೊಸದಾಗಿ ಉದ್ಘಾಟನೆಗೊಂಡ ರೈಲಿನಲ್ಲಿ ವಿದ್ಯಾರ್ಥಿಗಳು ಆರ್‌ಎಸ್‌ಎಸ್ ಹಾಡನ್ನು ಹಾಡಿರುವುದನ್ನು ಕೇಂದ್ರ ಸಚಿವ ಸುರೇಶ್ ಗೋಪಿ ಸಮರ್ಥಿಸಿಕೊಂಡಿದ್ದಾರೆ. ಇದು ಮಕ್ಕಳ ಮುಗ್ಧ ಆಚರಣೆಯ ಭಾಗವಾಗಿತ್ತು ಎಂದು ಅವರು ತ್ರಿಶೂರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರಿಗೆ ಆ ಹಾಡನ್ನು ಹಾಡಬೇಕೆಂದು ಅನಿಸಿತು ಮತ್ತು ಅವರು ಹಾಗೆಯೇ ಮಾಡಿದರು. ಹಾಗಂತ ಹಾಡಲೇಬಾರದು ಅನ್ನುವುದಕ್ಕೆ ಅದೇನು ತೀವ್ರವಾದಿ ಹಾಡಲ್ಲ ಎಂದು ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ ಸುರೇಶ್ ಗೋಪಿ ಹೇಳಿದರು. ಹೊಸದಾಗಿ ಉದ್ಘಾಟನೆಗೊಂಡ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ವಿದ್ಯಾರ್ಥಿಗಳ ಗುಂಪೊಂದು ಆರ್‌ಎಸ್‌ಎಸ್ ಹಾಡನ್ನು ಹಾಡಿದ ಒಂದು ದಿನದ ನಂತರ ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳು ವೈರಲ್ ಆಗಿ ತೀವ್ರ ಪರ ವಿರೋಧ ಚರ್ಚೆಗಳು ಶುರುವಾದ ನಂತರ ಕೇರಳ ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದೆ ಮತ್ತು ಕೇಂದ್ರ ಸಚಿವರು ಇದಕ್ಕೆ ಸಮರ್ಥನೆಯನ್ನು ಮಾಡಿದ್ದಾರೆ. ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೂಡ ಘಟನೆಯನ್ನು ಖಂಡಿಸಿದ್ದು, ಇದು ಪ್ರತಿಭಟಿಸಲು ಅರ್ಹವಾದ ವಿಚಾರ ಎಂದು ಹೇಳಿದ್ದಾರೆ. ಧಾರ್ಮಿಕ ದ್ವೇಷ ಮತ್ತು ಕೋಮು ವಿಭಜಕ ರಾಜಕೀಯವನ್ನು ನಿರಂತರವಾಗಿ ಹರಡುತ್ತಿದೆ ಎಂದು ಹೇಳಲಾಗುವ ಆರೆಸ್ಸೆಸ್‌ನ ಹಾಡನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಸೇರಿಸುವುದು ಸಾಂವಿಧಾನಿಕ ತತ್ವಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ.

Category
ಕರಾವಳಿ ತರಂಗಿಣಿ