ಮುಂಬೈ: ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಭಾಷೆ ವಿಚಾರವಾಗಿ ಸ್ಥಳೀಯರು ಮತ್ತು ಅನ್ಯಭಾಷಿಕ ಬ್ಯಾಂಕ್ ಸಿಬ್ಬಂದಿಯ ನಡುವೆ ಜಟಾಪಟಿಯ ಘಟನೆಗಳು ಹೆಚ್ಚುತ್ತಿರುವ ಹೊತ್ತಿನಲ್ಲೇ, 'ಬ್ಯಾಂಕ್‌ಗಳು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳಬೇಕು ಮತ್ತು ಅವರ ಸ್ಥಳೀಯ ಭಾಷಾ ಜ್ಞಾನದ ಆಧಾರದಲ್ಲೇ ಅವರ ವೃತ್ತಿಪರತೆ ಅಳೆಯಬೇಕು' ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 12ನೇ ಎಸ್‌ಬಿಐ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮನ್, 'ಪ್ರತಿಯೊಂದು ಶಾಖೆಯಲ್ಲಿ ನೇಮಿಸಲಾಗುವ ಎಲ್ಲಾ ಸಿಬ್ಬಂದಿಗೆ ಅಲ್ಲಿನ ಜನ ಮತ್ತು ಅವರಾಡುವ ಭಾಷೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು. ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಬರದಿದ್ದರೂ, ಶಾಖೆಯ ಮಟ್ಟದಲ್ಲಿ ಉನ್ನತ ಹುದ್ದೆಯಲ್ಲಿರುವವರು ಆ ರಾಜ್ಯದ ಭಾಷೆಯನ್ನು ಅರಿತಿರುವುದು ಕಡ್ಡಾಯ. ಇದೇ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು' ಎಂದರು.
ಸ್ಥಳೀಯ ಗ್ರಾಹಕರ ಮಹತ್ವ ಮತ್ತು ಅವರೊಂದಿಗೆ ಸಂಪರ್ಕದಲ್ಲಿರುವುದರ ಅಗತ್ಯತೆಯನ್ನೂ ಸಚಿವೆ ವಿವರಿಸಿದರು. 'ಬ್ಯಾಂಕಿನ ಬೆಳವಣಿಗೆಗಾಗಿ ಸ್ಥಳೀಯ ಗ್ರಾಹಕರೊಂದಿಗೆ ಸಂಪರ್ಕದಲ್ಲಿರುವುದು ಅಗತ್ಯ. ಮೊದಲೆಲ್ಲಾ ಅಧಿಕಾರಿಗಳಿಗೆ ಗ್ರಾಹಕರು ಮತ್ತು ಅವರ ಸಾಲ ಪಡೆದ ಅರ್ಹತೆಗಳ ಅರಿವಿರುತ್ತಿತ್ತು. ಆದರಿಂದು ಶಾಖೆಗಳಿಗೆ ತಮ್ಮ ಗ್ರಾಹಕರ ಪರಿಚಯವೇ ಇಲ್ಲದಂತಾಗಿದೆ. ತಂತ್ರಜ್ಞಾನ ಅಗತ್ಯವಾಗಿದ್ದರೂ, ಎಲ್ಲಾ ಕೆಲಸಗಳಿಗೆ ಅವನ್ನೇ ಅವಲಂಬಿಸುವುದು ಸಲ್ಲದು. ಕೆಲ ಸಂದರ್ಭಗಳಲ್ಲಿ ಸಿಬ್ಬಂದಿ ಖುದ್ದಾಗಿ ಜನರೊಂದಿಗೆ ಮಾತನಾಡುವುದು ಅಗತ್ಯ. ಇದಕ್ಕೆ ಭಾಷೆ ಮುಖ್ಯ. ಹಿಂದಿ, ಇಂಗ್ಲಿಷ್‌ಗಳನ್ನು ಬಲ್ಲವರಾಗಿದ್ದರೂ, ಮಾತೃಭಾಷೆಯಲ್ಲಿ ಮಾತನಾಡಿದಾಗ ಗ್ರಾಹಕರಿಗೆ ಅತ್ಯಾನಂದವಾಗುತ್ತದೆ' ಎಂದು ಅವರು ಹೇಳಿದರು. 'ಗ್ರಾಹಕರ ಮಾಹಿತಿಗಾಗಿ ಬ್ಯಾಂಕುಗಳೀಗ ಬಾಹ್ಯ ಕ್ರೆಡಿಟ್ ಮಾಹಿತಿ ಕಂಪನಿಗಳನ್ನು ಅವಲಂಬಿಸಿವೆ. ಇದರಿಂದಾಗಿ ಸಾಲಗಳು ತಿರಸ್ಕೃತಗೊಳ್ಳುವ ಸಾಧ್ಯತೆಯಿದೆ' ಎಂದೂ ಎಚ್ಚರಿಸಿದ ಸೀತಾರಾಮನ್, ಹಳೆಯ ಬ್ಯಾಂಕುಗಳು ರಾಷ್ಟ್ರೀಕೃತಗೊಳ್ಳುವ ಮುನ್ನ ಗ್ರಾಹಕ ಸಂಪರ್ಕಕ್ಕಾಗಿ ಅನುಸರಿಸಿದ ಕ್ರಮಗಳನ್ನು ವಿವರಿಸಿದರು.