image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕಗ್ಗಂಟಾದ ವಸೂಲಿ ಲೆಕ್ಕ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ವಿಜಯ್ ಮಲ್ಯ ಹೈಕೋರ್ಟ್ ಅರ್ಜಿ!

ಕಗ್ಗಂಟಾದ ವಸೂಲಿ ಲೆಕ್ಕ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ವಿಜಯ್ ಮಲ್ಯ ಹೈಕೋರ್ಟ್ ಅರ್ಜಿ!

ಬೆಂಗಳೂರು : ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ವಿರುದ್ದ ದೇಶದ ಹಲವು ಕೋರ್ಟ್‌ಗಳಲ್ಲಿ ಪ್ರಕರಣಳಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರ ವಿಜಯ್ ಮಲ್ಯ ಲಂಡನ್‌ನಿಂದ ಗಡೀಪಾರು ಮಾಡಲು ಕಾನೂನು ಹೋರಾಟ ನಡೆಸುತ್ತಿದೆ. ವಂಚನೆ ಪ್ರಕರಣಗಳಿಂದ ವಿಲನ್ ಆಗಿರುವ ವಿಜಯ್ ಮಲ್ಯ, ಕೆಲ ತಿಂಗಳ ಹಿಂದೆ ಪಾಡ್‌ಕಾಸ್ಟ್ ಮೂಲಕ ಪ್ರತ್ಯಕ್ಷರಾಗಿ ಹಲವರ ಪಾಲಿಗೆ ಹೀರೋ ಆಗಿದ್ದರು. ಇದೀಗ ಎಲ್ಲವೂ ಅದರ ಪಾಡಿಗೆ ನಡೆಯುತ್ತಿದೆ ಅನ್ನೋವಷ್ಟರಲ್ಲೇ ವಿಜಯ್ ಮಲ್ಯ ಲಂಡನ್‌ನಲ್ಲಿ ಕುಳಿತು ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಮಲ್ಯ ಹಾಕಿದ ಗೂಗ್ಲಿಗೆ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿತಾ ಅನ್ನೋ ಚರ್ಚೆಗಳು ಶುರುವಾಗಿದೆ. ವಿಜಯ್ ಮಲ್ಯ ಸಾಲ, ಬ್ಯಾಂಕ್‌ಗಳು ಆಸ್ತಿ ಜಪ್ತಿ, ಖಾತೆ ಫ್ರೀಜ್ ಮಾಡಿ ವಸೂಲಿ ಮಾಡಿರುವ ಮೊತ್ತ, ಎಲ್ಲಾ ಸೇರಿ ಲೆಕ್ಕ ಪತ್ರ ಕೊಡಿ ಎಂದು ವಿಜಯ್ ಮಲ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಮಲ್ಯ 6,200 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಬ್ಯಾಂಕ್‌ಗಳು ಬಡ್ಡಿ ಎಲ್ಲಾ ಸೇರಿ 14,000 ಕೋಟಿ ವಸೂಲಿ ಮಾಡಿದ್ದಾರೆ. ಇದರ ಸರಿಯಾದ ಲೆಕ್ಕ ಕೊಡಿ ಎಂದು ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ವಿಜಯ್ ಮಲ್ಯ ಪರ ಹಿರಿಯ ವಕೀಲ ಸಜನ್ ಪೂವಯ್ಯ ವಾದ ಮಂಡನೆ ಮುಂದಿಟ್ಟಿದ್ದಾರೆ. ನೀವು ಕಂಪನಿ ಕೋರ್ಟ್ ಗೆ ಅರ್ಜಿ ಏಕೆ ಸಲ್ಲಿಸಿಲ್ಲ, ಸುಪ್ರೀಂ ಕೋರ್ಟ್ ನ ನ್ಯಾಯಾಂಗ ನಿಂದನೆ ಕೇಸ್ ನಲ್ಲಿ‌ ಮಲ್ಯ ಹಾಜರಾಗಿಲ್ಲ. ವಿವಿದೆಡೆ ವಿಜಯ್ ಮಲ್ಯ ಪ್ರಕರಣದಲ್ಲಿ ಕೋರ್ಟ್‌ಗೆ ಹಾಜರಾಗಿಲ್ಲ. ಈಗ ರಿಟ್ ಅರ್ಜಿ ಸಲ್ಲಿಸಿದರೆ ಹೇಗೆ ಎಂದು ಕೋರ್ಟ್ ಪ್ರಶ್ನಿಸಿದೆ. ಆದರೆ ಸಜನ್ ಪೂವಯ್ಯ ಸಮರ್ಥ ವಾದ ಮಂಡಿಸಿದ್ದಾರೆ. ರಿಟ್ ಅರ್ಜಿಯಲ್ಲಿ ಬ್ಯಾಂಕ್ ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರೆಂದು ಕೋರ್ಟ್ ಪ್ರಶ್ನಿಸಿದೆ. ಇದಕ್ಕೆ ಪ್ರತಿವಾದ ಮುಂದಿಟ್ಟ ಸಜನ್ ಪೂವಯ್ಯ, ಸಾಲ ವಸೂಲಿ ಪ್ರಾಧಿಕಾರ ಹೈಕೋರ್ಟ್ ಅಧೀನದಲ್ಲಿ ಬರುತ್ತದೆ. ಬ್ಯಾಂಕ್‌ಗಳು ಒಂದೊಂದು ಹೇಳುತ್ತಾರೆ, ಅಫಿಷಿಯಲ್ ಲಿಕ್ವಿಡೇಟರ್ ಮತ್ತೊಂದು ಹೇಳುತ್ತಾರೆ. ಒಂದು ಕಾಲದಲ್ಲಿ ಯುಬಿಹೆಚ್ ಎಲ್ ಕಂಪನಿ ವಿಶ್ವದಲ್ಲಿ ಪ್ರಸಿದ್ಧ ಕಂಪನಿಯಾಗಿತ್ತು. ಡಾ. ವಿಜಯ್ ಮಲ್ಯ ಯುಬಿಹೆಚ್ ಎಲ್ ನಿರ್ದೇಶಕರಾಗಿದ್ದರು. ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸುವುದು ಅವರ ಸಾಂವಿಧಾನಿಕ ಹಕ್ಕೆಂದು ಸಜನ್ ಪೂವಯ್ಯ ವಾದ ಮಂಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನ ನ್ಯಾಯಾಂಗ ನಿಂದನೆ ಕೇಸ್ ನಲ್ಲಿ‌ ಮಲ್ಯ ಹಾಜರಾಗಿಲ್ಲ ಎಂದು ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಸಜನ್ ಪೂವಯ್ಯ, ವಿಜಯ್ ಮಲ್ಯ ಲಂಡನ್ ಕೋರ್ಟ್ ನ ಕಾನೂನು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ ಎಂದಿದ್ದಾರೆ. ಮಲ್ಯ 6200 ಕೋಟಿ ಸಾಲ ಕೊಡಬೇಕಿತ್ತು, 14,000 ಕೋಟಿ ವಸೂಲಾಗಿದೆ. ಈ ಲೆಕ್ಕಾಚಾರವನ್ನು ಲೋಕಸಭೆಯಲ್ಲಿ ಹಣಕಾಸಸು ಸಚಿವರು ಮಂಡಿಸಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ಕೋರಿ ಡಾ. ವಿಜಯ್ ಮಲ್ಯ ಅರ್ಜಿ ಸಲ್ಲಿಸಿದ್ದಾರೆ ಎಂದು ವಾದ ಮಂಡಿಸಿದ್ದಾರೆ. ಬ್ಯಾಂಕ್ ಗಳ ಪರ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ವಾದ ಮಂಡಿಸಿದ್ದಾರೆ. ಮಲ್ಯ ದೇಶ ತೊರೆದು ದೇಶಭ್ರಷ್ಟರಾಗಿದ್ದಾರೆ. ಮಲ್ಯ ಮುಗ್ದರಾದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆಂದು ವಾದ ಮಂಡಿಸಿದ್ದಾರೆ. ಪೂವಯ್ಯ ಮಂಡಿಸಿದ ವಾದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕ್ ಗಳ ಪರ ವಕೀಲರಿಗೆ ನ್ಯಾ. ಲಲಿತಾ ಕನ್ನೆಗಂಟಿ ಸೂಚನೆ ನೀಡಿದ್ದಾರೆ. ಇದೇ ವೇಳೆ ವಿಚಾರಣೆಯನ್ನು ನ.12 ಕ್ಕೆ ಮುಂದೂಡಿದೆ.

Category
ಕರಾವಳಿ ತರಂಗಿಣಿ