image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಾಟ್ಸಾಪ್ ಅಥವಾ ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನೋಟಿಸ್ ನೀಡುವ ಕ್ರಮವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ವಾಟ್ಸಾಪ್ ಅಥವಾ ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನೋಟಿಸ್ ನೀಡುವ ಕ್ರಮವನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ವಾಟ್ಸಾಪ್ ಅಥವಾ ಟ್ವಿಟರ್ ಮುಂತಾದ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನೋಟಿಸ್ ನೀಡುವ ಕ್ರಮವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ನೋಟಿಸ್ ನೀಡುವ ಪ್ರಕ್ರಿಯೆ ಕಾನೂನಿನ ಪ್ರಕಾರ ನಡೆಯಬೇಕು ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.  ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ, ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಅವರಿದ್ದ ಪೀಠವು, "ವಾಟ್ಸಾಪ್ ಅಥವಾ ಟ್ವಿಟರ್ ನಲ್ಲಿ ನೋಟಿಸ್‌ ನೀಡಬೇಡಿ. ಕಾನೂನಿನ ಪ್ರಕಾರ ಸರಿಯಾದ ರೀತಿಯಲ್ಲಿ ಸಲ್ಲಿಸಿ" ಎಂದು ಎಚ್ಚರಿಕೆ ನೀಡಿತು. ಅತ್ಯಾಚಾರ ಆರೋಪ ಸೇರಿದಂತೆ ಬಿಎನ್‌ಎಸ್‌ನ ಸೆಕ್ಷನ್ 64(2)(f), 351(2), 296 ಹಾಗೂ 3(5) ಅಡಿಯಲ್ಲಿ ಆರೋಪ ಎದುರಿಸುತ್ತಿರುವ ಅರ್ಜಿದಾರರ ಪರವಾಗಿ ವಕೀಲರು ಹಾಜರಾಗಿದ್ದರು. ನ್ಯಾಯಾಲಯ "ದೂರುದಾರರಿಗೆ ನೋಟಿಸ್ ನೀಡಿದ್ದೀರಾ?" ಎಂದು ಪ್ರಶ್ನಿಸಿದಾಗ, ವಕೀಲರು "ದೂರುದಾರರು ಸಂಪರ್ಕದಲ್ಲಿಲ್ಲ; ಆದ್ದರಿಂದ ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸಿದ್ದೇವೆ" ಎಂದು ಹೇಳಿದರು.

ಇದಕ್ಕೆ ತಕ್ಷಣ ನ್ಯಾಯಮೂರ್ತಿ ಕುಮಾರ್ ಪ್ರತಿಕ್ರಿಯಿಸಿ, "ಇಲ್ಲ, ಇಲ್ಲ... ವಾಟ್ಸಾಪ್ ಅಥವಾ ಟ್ವಿಟರ್ ಮೂಲಕ ನೋಟಿಸ್ ನೀಡಬಾರದು. ಹೋಗಿ ಕಾನೂನಿನ ಪ್ರಕಾರ ನೋಟೀಸ್ ನೀಡಿ" ಎಂದು ಸೂಚಿಸಿದರು. ವಕೀಲರು "ದೂರುದಾರರು ವಾಟ್ಸಾಪ್ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ಮಾಹಿತಿ ಅಧಿಕಾರಿಯೂ 'ಸುಪ್ರೀಂ ಕೋರ್ಟ್ ನಿರ್ದೇಶನ ಬಂದರೆ ಮಾತ್ರ ಸ್ವೀಕರಿಸುತ್ತೇವೆ' ಎಂದು ಹೇಳಿದ್ದಾರೆ" ಎಂದರೂ, ಪೀಠವು ತನ್ನ ನಿಲುವಿನಲ್ಲಿ ಬದಲಾವಣೆ ತೋರಿಸಲಿಲ್ಲ. ನಂತರ ಪೀಠವು ಸಂಬಂಧಪಟ್ಟ ಪೊಲೀಸರಿಗೆ ಎರಡು ವಾರಗಳೊಳಗೆ ಸಂತ್ರಸ್ತೆಗೆ ನೋಟಿಸ್ ನೀಡುವಂತೆ ನಿರ್ದೇಶಿಸಿತು. ಜೊತೆಗೆ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ಮುಂದುವರಿಸಿತು.

Category
ಕರಾವಳಿ ತರಂಗಿಣಿ