ನವದೆಹಲಿ : ಸೆಮಿಕಂಡಕ್ಟರ್ ಉದ್ಯಮ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಮತ್ತು ಅಸ್ಸಾಮ್ ಸಿಎಂ ಹಿಮಂತ ಬಿಸ್ವ ಶರ್ಮ ಮಧ್ಯೆ ವಾಗ್ಸಮರ ಮುಂದುವರಿಯುತ್ತಿದೆ. ಏಟಿಗೆ ಪ್ರತಿಯೇಟು ನಡೆಯುತ್ತಲೇ ಇದೆ. ಹೊಸ ವಾಗ್ದಾಳಿಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಹಿಮಂತ ಬಿಸ್ವ ಶರ್ಮ ಅವರನ್ನು ಥರ್ಡ್ ಕ್ಲಾಸ್ ಕ್ರೂಕ್ ಎಂದು ಜರೆದಿದ್ದಾರೆ. ಶರ್ಮಾ ಹತಾಶೆಯಲ್ಲಿದ್ದಾರೆ ಎಂದು ಖರ್ಗೆ ಟೀಕಿಸಿದ್ದಾರೆ. ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿರುವ ಅಸ್ಸಾಮ್ ಮುಖ್ಯಮಂತ್ರಿಗಳು, ಅಸ್ಸಾಮ್ ಅನ್ನು ಮುಂದುವರಿದ ರಾಜ್ಯವಾಗಿ ನೋಡಲು ಹತಾಶನಾಗಿದ್ದೇನೆ ಎಂದು ತಿವಿದಿದ್ದಾರೆ. ನಾನು ಡೆಸ್ಪರೇಟ್ ಆಗಿದ್ದೇನೆ. ಅಸ್ಸಾಮ್ ಅನ್ನು ಮುಂದುವರಿದ ರಾಜ್ಯವಾಗಿ ನೋಡಲು ಬಯಸುತ್ತೇನೆ. ದಕ್ಷಿಣ ರಾಜ್ಯಗಳು ಅಭಿವೃದ್ಧಿ ಹೊಂದಿವೆ. ಪಶ್ಚಿಮ ಭಾಗದ ರಾಜ್ಯಗಳು ಅಭಿವೃದ್ಧಿ ಹೊಂದಿವೆ. ಈಶಾನ್ಯ ರಾಜ್ಯದ ಮುಖ್ಯಮಂತ್ರಿ ತನ್ನ ರಾಜ್ಯವನ್ನು ಮುಂದುವರಿದ ರಾಜ್ಯವಾಗಿ ನೋಡಬೇಕೆಂದು ಕನಸು ಕಾಣಬಾರದ? ಅದನ್ನು ಹತಾಶೆ ಎನ್ನುತ್ತೀರಾ?' ಎಂದು ಕೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಹಿಮಂತ ಬಿಸ್ವ ಶರ್ಮ, 'ಅವರ (ಖರ್ಗೆ) ಹೇಳಿಕೆ ನೋಡಿದರೆ ಅವರು ಫಸ್ಟ್ ಕ್ಲಾಸ್ ಈಡಿಯಟ್. ಅವರಿಗೆ ಭಾರತ ದೇಶ ಅರ್ಥ ಆಗುವುದಿಲ್ಲ. ಈಶಾನ್ಯ ರಾಜ್ಯಗಳ ಮೌಲ್ಯ ಅವರಿಗೆ ಅರ್ಥ ಆಗುವುದಿಲ್ಲ. ನಮಗೆ ಯಾವ ಪ್ರಿವಿಲೇಜ್ ಇದೆ ಹೇಳಿ? ಕಳೆದ 75 ವರ್ಷದಲ್ಲಿ ಒಂದೇ ಒಂದು ಖಾಸಗಿ ಉದ್ಯಮ ಇಲ್ಲಿ ನೆಲಸಿಲ್ಲ. ಒಂದು ಇಂಡಸ್ಟ್ರಿಯನ್ನು ಪಡೆದಿದ್ದಕ್ಕೆ ನಾವು ಪ್ರಿವಿಲೇಜ್ಡ್ ಆಗಿಬಿಟ್ಟೆವಾ? ನೀವು ಮಾತ್ರ ನೂರು ನೂರು ಪಡೆಯುತ್ತೀರಿ. ನಾವು ಅಸ್ಸಾಮ್ಗೆ ಏನು ಮಾಡಿದ್ದೇವೆ ಎಂಬುದನ್ನು ಅಸ್ಸಾಮ್ನ ಜನರು ಅರ್ಥ ಮಾಡಿಕೊಳ್ಳಬೇಕು' ಎಂದು ವಾಗ್ದಾಳಿ ನಡೆಸಿದ್ದಾರೆ.