ಪಟ್ನಾ: ಬಿಹಾರದಲ್ಲಿ ಚುನಾವಣೆಗೆ ಹೆಚ್ಚುಕಡಿಮೆ ಇನ್ನೊಂದು ವಾರ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರಮಟ್ಟದ ಘಟಾನುಘಟಿ ನಾಯಕರೆಲ್ಲಾ ಅಲ್ಲಿ ಪ್ರಚಾರಕ್ಕೆ ಹೋಗಿ ಬಂದಿದ್ದಾರೆ. ಆದರೆ, ಕಾಂಗ್ರೆಸ್ಸಿನ ಪ್ರಧಾನ ನಾಯಕರಾಗಿರುವ ರಾಹುಲ್ ಗಾಂಧಿ ಮಾತ್ರ ಬಿಹಾರದತ್ತ ಇನ್ನೂ ಮುಖ ಮಾಡಿಲ್ಲ. ಇದು ಅಲ್ಲಿನ ಕಾಂಗ್ರೆಸ್ಸಿಗರಿಗೆ ನಿರಾಸೆ ತಂದಿದೆ. ರಾಹುಲ್ ಗಾಂಧಿ ಸುಮ್ಮನೇ ಕುಳಿತವರೇನಲ್ಲ. ಕೆಲವು ತಿಂಗಳುಗಳಿಂದ ಬಿಜೆಪಿ ವಿರುದ್ಧ ವೋಟ್ ಚೋರಿ ರಹಕಹಳೆ ಊದಿರುವ ಅವರು, ಬಿಹಾರದಲ್ಲೂ ವೋಟ್ ಚೋರಿಯ ಕಿಚ್ಚು ಹೊತ್ತಿಸಿದ್ದರು. ಮತದಾರರ ಗುರುತಿನ ಚೀಟಿಗಳ ವಿಶೇಷ ಪರಿಶೀಲನೆ (SIR) ಪ್ರಕ್ರಿಯೆಯಡಿ ಲಕ್ಷಾಂತರ ಮಂದಿಯನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟಾಗಲೂ ಪಾಟ್ನಾದಲ್ಲಿ ಬೀದಿಗಿಳಿದು ಹೋರಾಟ ಮಾಡಿದರು. ವೋಟರ್ಸ್ ಅಧಿಕಾರ್ ಯಾತ್ರಾ ಎಂಬ ಆಂದೋಲನದೊಂದಿಗೆ ಅಲ್ಲಿನ ಕಾಂಗ್ರೆಸ್ಸಿನಲ್ಲಿ ಹೊಸ ಸಂಚಲನ ತಂದವರು. ಅಂಥ ರಾಹುಲ್ ಗಾಂಧಿ, ಈಗ ಬಿಹಾರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಮತದಾನ ಆರಂಭವಾಗುತ್ತದೆ. ನ. 6 ಮತ್ತು 7ರಂದು ಮತದಾನ ನಡೆಯುತ್ತೆ. ಅದಕ್ಕೆ 48 ಗಂಟೆಗಳ ಮುನ್ನವೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತೆ. ಅಂದರೆ, ನ. 5ರೊಳಗೆ ಎಲ್ಲಾ ಪಾರ್ಟಿಗಳು ತಮ್ಮ ಶಕ್ತಿ ಮೀರಿ ಪ್ರಚಾರ ನಡೆಸಲು ಅವಕಾಶವಿದೆ. ಇಂಥ ಪೀಕ್ ಹೌವರ್ಸ್ ಸಂದರ್ಭದಲ್ಲಿ ರಾಹುಲ್ ಗಾಂಧಿ ಬಿಹಾರದಲ್ಲಿರಬೇಕಿತ್ತು. ಪಾಟ್ನಾ ಸೇರಿದಂತೆ ಆ ರಾಜ್ಯದ ಹಲವಾರು ಕಡೆಗಳಲ್ಲಿ ಬಹಿರಂಗ ಪ್ರಚಾರಗಳು, ರ್ಯಾಲಿಗಳಲ್ಲಿ ಭಾಗವಹಿಸಿ ಕಾಂಗ್ರೆಸ್ಸಿಗೆ ಶಕ್ತಿ ತುಂಬಬೇಕಿತ್ತು. ಬಹಿರಂಗ ಪ್ರಚಾರ ಪಕ್ಕಕ್ಕಿರಲಿ. ರಾಹುಲ್ ಬಿಹಾರದ ಕಡೆ ಮುಖವನ್ನೇ ಮಾಡಿಲ್ಲ ಎಂದು ಹೆಸರನ್ನೇಳಲು ಇಚ್ಛಿಸದ ಅಲ್ಲಿನ ಕಾಂಗ್ರೆಸ್ ನಾಯಕರೊಬ್ಬರು ಬೇಸರಿಸಿದ್ದಾರೆ. ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಚೇರಿ ಅಧಿಕಾರಿಯೊಬ್ಬರು ಮಾತನಾಡಿ, "ನಾವು ರಾಹುಲ್ ಜೀ ಅವರು ದೆಹಲಿಯ ರಸ್ತೆಯೊಂದರ ಪಕ್ಕದ ತಳ್ಳೋ ಗಾಡಿಯಲ್ಲಿ ಸಿಹಿತಿನಿಸು ತಯಾರಿಸಿದ ವಿಡಿಯೋವನ್ನು ಇತ್ತೀಚೆಗೆ ನೋಡಿದೆವು. ಅದರರ್ಥ ಅವರು ಭಾರತದಲ್ಲೇ ಇದ್ದಾರೆ. ಆದರೆ, ಬಿಹಾರಕ್ಕೆ ಯಾಕೋ ಇನ್ನೂ ಬಂದಿಲ್ಲ" ಎಂದು ಹೇಳಿದ್ದಾರೆ. ಅವರು ಹಾಗೆ ಹೇಳಿದಾಗ ಅವರ ಮಾತುಗಳಲ್ಲಿ ದುಗುಡವಿತ್ತು.
ಈ ಬಾರಿಯ ಮಹಾಘಟಬಂಧನ್ ಸೀಟು ಹಂಚಿಕೆಯ ಚರ್ಚೆಗಳಲ್ಲಿಯೇ ರಾಹುಲ್ ಗಾಂಧಿ ಬಾಗವಹಿಸಿರಲಿಲ್ಲ. ಆಗಲೇ ಅವರು ಮೈತ್ರಿ ಪಕ್ಷವಾದ ಆರ್ ಜೆಡಿ ಜೊತೆಗೆ ತಿಕ್ಕಾಟ ಶುರುವಾಗಿತ್ತು. ಕಡೆಗೂ ಒಲ್ಲದ ಮನಸ್ಸಿನಿಂದ ಕಾಂಗ್ರೆಸ್, ಆರ್ ಜೆಡಿಗೆ 143 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು. ತಾನು 61 ಸ್ಥಾನಗಳಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿತು. ಅಲ್ಲಿಂದಲೇ ಶುರುವಾಗಿದೆ ಅಸಮಾಧಾನ. ಟಿಕೆಟ್ ಹಂಚಿಕೆಯಲ್ಲೂ ವ್ಯಾಪಕ ಭ್ರಷ್ಟಾಚಾರವಾಗಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದ ಆನಂದ್ ಮಾಧವ್ ಅವರೇ ಆರೋಪಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 100, 200 ಮತಗಳ ಅಂತರದಿಂದ ಸೋತುವರನ್ನು ಬಿಟ್ಟು 30,000 - 40,000 ಮತಗಳ ಅಂತರದಲ್ಲಿ ಸೋತವರಿಗೆ ಟಿಕೆಟ್ ನೀಡಿದ್ದಾರೆ. ಚುನಾವಣಾ ಟಿಕೆಟ್ ಗಳನ್ನು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ಅವರು ಆಪಾದಿಸಿದ್ದಾರೆ. ಅತ್ತ, ಕಾಂಗ್ರೆಸ್ ನಾಯಕರು ಇದನ್ನು ಅಲ್ಲಗಳೆದಿದ್ದಾರಾದೂ ಗೆಲ್ಲುವ ಕುದುರೆಗಳಿಗೆ ಈ ಬಾರಿ ಟಿಕೆಟ್ ಸಿಕ್ಕಿಲ್ಲ ಎಂದು ಸೌಮ್ಯವಾಗಿ ಒಪ್ಪಿಕೊಳ್ಳುತ್ತಾರೆ ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಬಹುಶಃ ಇದೆಲ್ಲಾ ಕಾರಣಗಳಿಗೆ ರಾಹುಲ್ ಗಾಂಧಿಯವರು ಬಿಹಾರದ ಕಡೆಗೆ ಮುಖ ಮಾಡಿಲ್ಲ ಎನ್ನಲಾಗುತ್ತಿದೆ.
ಈ ನಡುವೆ ಅಕ್ಟೋಬರ್ 29ರಂದು ರಾಹುಲ್ ಗಾಂಧಿ ಅವರು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳ ಪರ ಚುನಾವಣಾ ರ್‍ಯಾಲಿ ನಡೆಸಲಿದ್ದಾರೆ. ಮುಜಾಫರ್‌ಪುರ ಮತ್ತು ದರ್ಭಾಂಗ ಜಿಲ್ಲೆಗಳಲ್ಲಿ ರಾಹುಲ್ ರ್‍ಯಾಲಿ ನಡೆಸಿ, ಸಾರ್ವಜನಿಕ ಸಮಾವೇಶವನ್ನು ಉದ್ದೇಶಸಿ ಮಾತನಾಡಲಿದ್ದಾರೆ. ಈ ಮೂಲಕ ಬಿಹಾರ ವಿಧಾನಸಭೆಗೆ ಚುನಾವಣಾ ಪ್ರಚಾರವನ್ನು ಆರಂಭಿಸಲಿದ್ದಾರೆ. ರಾಹುಲ್ ಅವರು ಮೊದಲು ಮುಜಾಫರ್‌ಪುರದ ಮೀಸಲು ಕ್ಷೇತ್ರ ಸಕ್ರಾದ ಅಭ್ಯರ್ಥಿ ಉಮೇಶ್ ರಾಮ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜೇಶ್ ರಾಥೋಡ್ ತಿಳಿಸಿದ್ದಾರೆ. ಈ ವೇಳೆ ರಾಹುಲ್ ಜತೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಭಾಗವಹಿಸುವ ನಿರೀಕ್ಷೆಯಿದೆ ಎಂದು ರಾಥೋಡ್ ಹೇಳಿದ್ದಾರೆ.