ಆಗ್ರ : ದೀಪಾವಳಿ ಸಂಭ್ರಮದ ಎಲ್ಲೆಡೆ ಜೋರಾಗಿದೆ. ಹಲವು ಕಂಪನಿಗಳು ಹೆಚ್ಚುವರಿ ರಜೆ ನೀಡಿದೆ. ಬಹುತೇಕ ಕಂಪನಿಗಳು ದೀಪಾವಳಿ ಬೋನಸ್, ಹೆಚ್ಚುವರಿ ಸ್ಯಾಲರಿ, ಗಿಫ್ಟ್, ವೋಚರ್ ಸೇರಿದಂತೆ ಹಲವು ರೀತಿಯಲ್ಲಿ ಉದ್ಯೋಗಿಗಳ ಸಂಭ್ರಮ ಹೆಚ್ಚಿಸಿದೆ. ಈ ಮೂಲಕ ಉದ್ಯೋಗಿಗಳು ಕುಟುಂಬದ ಜೊತೆ ದೀಪಾವಳಿ ಆಚರಿಸಲು ಅನುವು ಮಾಡಿಕೊಟ್ಟಿದೆ. ಆದರೆ ಟೋಲ್ ಸಿಬ್ಬಂದಿಗಳಿಗೆ ದೀಪಾವಳಿ ಬೋನಸ್ ಕೊಡದ ಕಾರಣ ಇದೀಗ ಒಂದೇ ದಿನ ಲಕ್ಷ ಲಕ್ಷ ರೂಪಾಯಿ ನಷ್ಟವಾಗಿದೆ.ಸಿಬ್ಬಂದಿಗಳಿಗೆ ಈ ನಡೆಯಿದ ಕೇಂದ್ರ ಸರ್ಕಾರಕ್ಕೂ ಭಾರಿ ನಷ್ಟವಾದ ಘಟನೆ ಆಗ್ರ-ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಬರುವ ಫತೇಬಾದ್ ಟೋಲ್ ಪ್ಲಾಜಾದಲ್ಲಿ ನಡೆದಿದೆ. ಟೋಲ್ ಗೇಟ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ತಮಗೆ ದೀಪಾವಲಿ ಬೋನಸ್ ನೀಡಿಲ್ಲ ಎಂದು ರೊಚ್ಚಿಗೆದ್ದಿದ್ದಾರೆ. ಎಲ್ಲಾ ಹಬ್ಬದ ವೀಕೆಂಡ್,ರಜಾ ದಿನಗಳಲ್ಲಿ ನಾವು ಕೆಲಸ ಮಾಡುತ್ತೇವೆ. ಕನಿಷ್ಠ ಬೋನಸ್ ನಾವು ನಿರೀಕ್ಷೆ ಮಾಡಿದ್ದೆವು. ಆದರೆ ನಮಗೆ ಕೊಟ್ಟಿಲ್ಲ ಎಂದು ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ. ಬೋನಸ್ ನೀಡಿಲ್ಲ ಎಂಬ ಕಾರಣಕ್ಕೆ ಫತೇಬಾದ್ ಟೋಲ್ ಗೇಟ್ ತೆರೆದಿಟ್ಟಿದ್ದಾರೆ. ದೀಪಾವಳಿ ರಜಾ ದಿನದಲ್ಲೇ ಸಿಬ್ಬಂದಿಗಳು ಈ ರೀತಿ ಮಾಡಿದ್ದಾರೆ. ಇದರಿಂದ ಎಲ್ಲಾ ವಾಹನಗಳು ಟೋಲ್ ನೀಡದೆ ವೇಗವಾಗಿ ಸಾಗಿದೆ. ಸ್ಕ್ಯಾನ್ ಮಾಡುವ ಮುನ್ನವೇ ವಾಹನಗಳು ಟೋಲ್ ಗೇಟ್ ಮೂಲಕ ಸಾಗಿದೆ.
ಟೋಲ್ ಸಿಬ್ಬಂಧಿ ಕೆಲಸ ಸುಲಭವಲ್ಲ. ಹೆಚ್ಚುವರಿ ಡ್ಯೂಟಿ ಮಾಡಬೇಕು. ನಮ್ಮ ವೇತನವೂ ಕಡಿಮೆ.ನಾವು ಹಬ್ಬದ ವೇಳೆ ಬೋನಸ್ ನಿರೀಕ್ಷೆ ಮಾಡಿದ್ದೆವು.ಆದರೆ ಕೊಟ್ಟಿಲ್ಲ. ಇದು ನಮ್ಮ ತಾಳ್ಮೆ ಪರೀಕ್ಷಿಸುವಂತೆ ಮಾಡಿತ್ತು ಎಂದು ಸಿಬ್ಬಂದಿಗಳು ಆರೋಪಿಸಿದ್ದಾರೆ. ಒಂದು ದಿನ ಫತೇಬಾದ್ ಟೋಲ್ ಗೇಟ್ ತೆರೆದಿಡಲಾಗಿತ್ತು. ಟೋಲ್ ಟೆಂಡರ್ ಪಡೆದವರಿಗೆ ಸಿಬ್ಬಂದಿಗಳ ಈ ನಡೆಯಿಂದ ಭಾರಿ ನಷ್ಟವಾಗಿದೆ. ದೀಪಾವಳಿ ಹಬ್ಬದ ವೇಳೆ ಅತೀ ಹೆಚ್ಚು ಮಂದಿ ವಾಹನ ಮೂಲಕ ತೆರಳುತ್ತಾರೆ. ಆದರೆ ಟೋಲ್ ನೀಡದೆ ಸಾಗಿದ ಕಾರಣ ಒಂದೇ ದಿನ ಲಕ್ಷ ಲಕ್ಷ ರೂಪಾಯಿ ನಷ್ಟವಾಗಿದೆ. ಟೋಲ್ ಟೆಂಡರ್ ಪಡೆವರಿಗೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಈ ನಡೆಯಿಂದ ಬಾರಿ ನಷ್ಟವಾಗಿದೆ. ಶಿರ್ಸಾಯಿ ಹಾಗೂ ದಾತರ್ ಎಂಬ ಎರಡು ಕಂಪನಿಗಳು ಆಗ್ರಾ ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿರುವ ಬಹುತೇಕ ಟೋಲ್ ನಿರ್ವಹಣೆ ಮಾಡುತ್ತಿದೆ. ಕಂಪನಿ ದೀಪಾವಳಿ ಬೋನಸ್ ನೀಡುವುದಾಗಿ ಘೋಷಿಸಿತ್ತು. ಆದರೆ ದೀಪಾವಳಿ ಹಬ್ಬ ಬಂದರೂ ಬೋನಸ್ ಖಾತೆಗೆ ಹಾಕಿಲ್ಲ. ಹೀಗಾಗಿ ಪ್ರಿತಭಟನೆ ಮಾಡದೇ ಬೇರೆ ದಾರಿ ಇರಲಿಲ್ಲ ಎಂದು ಸಿಬ್ಬಂದಿಗಳು ಆಕ್ರೋಶ ಹೊರಹಾಕಿದ್ದಾರೆ. ಬರೋಬ್ಬರಿ 10 ಗಂಟೆಗಳ ಕಾಲ ಟೋಲ್ ಗೇಟ್ ತೆರೆದಿಡಲಾಗಿತ್ತು. ಹಬ್ಬ ಹಾಗೂ ವಾರಾಂತ್ಯದ ರಜಾ ದಿನದ ವೇಳೆಯೇ ಈ ರೀತಿ ಪ್ರತಿಭಟನೆ ಮಾಡಲಾಗಿದೆ. ಹೀಗಾಗಿ ಅಪಾರ ನಷ್ಟವಾಗಿದೆ. ಬರೋಬ್ಬರಿ 10 ಗಂಟೆಗಳ ಕಾಲ ಯಾವುದೇ ಮಾತುಕತೆಗೂ, ಮನಒಲಿಕೆಗೆ ಸಿಬ್ಬಂದಿಗಳು ಜಗ್ಗಿಲ್ಲ. ಬಳಿಕ ಬೋನಸ್ ನೀಡುವ ಭರವಸೆ ನೀಡಿದ ಬಳಿಕ ಟೋಲ್ ಗೇಟ್ ಮುಚ್ಚಿ, ಎಂದಿನಂತೆ ಕಾರ್ಯನಿರ್ವಹಣೆ ಮಾಡಲಾಗಿದೆ. ಶೀಘ್ರದಲ್ಲೇ ಬೋನಸ್ ಬರದಿದ್ದರೆ ಮತ್ತೆ ಪ್ರತಿಭಟನೆ ಮಾಡುವುದಾಗಿ ಸಿಬ್ಬಂದಿಗಳು ಎಚ್ಚರಿಸಿದ್ದಾರೆ.