ಬಿಹಾರ : ಬಿಹಾರ ಚುನಾವಣೆ ಚಿತ್ರಣ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. 243 ಸೀಟುಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್-ಆರ್‌ಜೆಡಿ ಪಕ್ಷದ ಸೀಟು ಹಂಚಿಕೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ಬಿಹಾರ ವಿಧಾನಸಭೆ 2ನೇ ಹಂತದ ಮತದಾನ ನಡೆಯುವ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಇಂದು ಆರ್‌ಜೆಡಿ 143 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ ಮೂಲಕ ಇಂಡಿಯಾ ಅಥವ ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಸಾಬೀತು ಮಾಡಿದೆ. ಮೈತ್ರಿಕೂಟದ ಒಪ್ಪಂದದ ಪ್ರಕಾರ ಕಾಂಗ್ರೆಸ್, ಆರ್‌ಜೆಡಿ ಸೀಟು ಹಂಚಿಕೆ ಮಾಡಿಕೊಂಡಿವೆ. ಆದರೆ 5 ಕ್ಷೇತ್ರಗಳಲ್ಲಿ ಆರ್‌ಜೆಡಿ, ಕಾಂಗ್ರೆಸ್ ಅಭ್ಯರ್ಥಿಗಳು ಎದುರಾಳಿಗಳಾಗಿದ್ದು, ಜನರ ಗೊಂದಲಕ್ಕೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ರಾಜ್ಯದ 60 ಸೀಟುಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿಯುತ್ತಿದೆ.
'ಇಂಡಿಯಾ' ಮೈತ್ರಿಕೂಟದ ಸೀಟು ಹಂಚಿಕೆ ಮೊದಲಿನಿಂದಲೂ ಕಗ್ಗಂಟಾಗಿತ್ತು. ಆದ್ದರಿಂದ ಎಎಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಿತು. ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವಿನ ಸೀಟು ಹಂಚಿಕೆ ಅಂತಿಮವಾಗಲೇ ಇಲ್ಲ. ಮೈತ್ರಿಕೂಟದ ನಡೆಯಿಂದ ಬೇಸತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮಹಾಘಟಬಂಧನ್‌ನಿಂದ ಹೊರಬಂದು ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿತು. ಮೈತ್ರಿಕೂಟದ ಸೀಟು ಹಂಚಿಕೆ ಗೊಂದಲ ಕಂಡು ಬಿಜೆಪಿ ಟೀಕೆಗಳನ್ನು ಮಾಡಿತು.
ಆರ್‌ಜೆಡಿ ಕುಟುಂಬ ಕ್ಷೇತ್ರದಿಂದ ಕಣಕ್ಕಿಳಿಯಲಿದೆ ಎಂಬ ಸುದ್ದಿಗಳಿಗೆ ಸೋಮವಾರ ತೆರೆ ಬಿದ್ದಿದೆ. ಪ್ರಸ್ತುತ ಕ್ಷೇತ್ರವನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಕುಮಾರ್ ರಾಮ್ ಪ್ರತಿನಿಧಿಸುತ್ತಿದ್ದಾರೆ. ಆರ್‌ಜೆಡಿ ವೈಶಾಲಿ, ಲಾಲ್ಗಂಜ್ ಮತ್ತು ಕಹಲ್ಗಾಂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸುತ್ತಿದೆ. ಮಹಾಘಟಬಂಧನ್‌ನ ವಿಇಪಿ ಪಕ್ಷದ ಅಭ್ಯರ್ಥಿ ವಿರುದ್ಧ ತಾರಾಪುರ ಮತ್ತು ಗೌರ ಬೋರಾಮ್ ಕ್ಷೇತ್ರಗಳಲ್ಲಿ ಪೈಪೋಟಿ ನೀಡಲಿದೆ. ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಆಪ್ತ ಸಹಾಯಕ ಭೋಲಾ ಯಾದವ್ 2015ರಲ್ಲಿ ಬಹಾದುರ್ಪುರ ಕ್ಷೇತ್ರದಿಂದ ಗೆದ್ದಿದ್ದರು. ಆದರೆ, ನಂತರ ನಡೆದ ಚುನಾವಣೆಯಲ್ಲಿ ಕ್ಷೇತ್ರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಪಾಲಾಯಿತು. ಈ ಬಾರಿ ಕ್ಷೇತ್ರವನ್ನು ವಶಕ್ಕೆ ಪಡೆಯಲು ಆರ್‌ಜೆಡಿ ತಂತ್ರ ರೂಪಿಸಿದೆ.