ಬಿಹಾರ : ಬಿಹಾರ ವಿಧಾನಸಭಾ ಚುನಾವಣೆಗೆ ಮಹಾಘಟಬಂಧನ್ ಹೆಸರಿನಲ್ಲಿ ಹೋರಾಟಕ್ಕೆ ಸಜ್ಜಾಗಿರುವ ಕಾಂಗ್ರೆಸ್- ಆರ್ ಜೆಡಿ ನೇತೃತ್ವದ ಮೈತ್ರಿಕೂಟಕ್ಕೆ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಶಾಕ್ ನೀಡಿದ್ದು, ಆರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ. ಸೀಟು ಹಂಚಿಕೆ ಮಾತುಕತೆಯಲ್ಲಿ ಭಾರೀ ಹಗ್ಗ ಜಗ್ಗಾಟ ನಡೆಯುತ್ತಿದ್ದು ಅನೇಕರು ಟಿಕೆಟ್ ಸಿಗುವುದಿಲ್ಲ ಎಂದು ಖಚಿತವಾಗುತ್ತಿದ್ದಂತೆ ಬಂಡಾಯ ನಿಲ್ಲುವ ಸೂಚನೆಯನ್ನೂ ನೀಡಿದ್ದಾರೆ. ಇನ್ನು ಕೆಲ ಅಭ್ಯರ್ಥಿಗಳು ಶರ್ಟ್ ಹರಿದುಕೊಂಡು, ರಸ್ತೆಯಲ್ಲಿ ಹೊರಳಾಡಿ ಹೈಡ್ರಾಮಾ ಮಾಡಿರುವ ವಿಡಿಯೋಗಳೂ ವೈರಲ್ ಆಗುತ್ತಿವೆ. ಖುದ್ದು ಲಾಲು ಪ್ರಸಾದ್ ಯಾದವ್ ಅವರೇ ಸೀಟು ಹಂಚಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಇನ್ನೊಂದೆಡೆ ಮೈತ್ರಿ ಕೂಟದಲ್ಲಿನ ಗೊಂದಲ ರಾಹುಲ್ ಗಾಂಧಿ ಅವರಿಗೆ ತಲೆ ನೋವು ತಂದಿಟ್ಟಿದೆ.
"ಬಿಹಾರ ಚುನಾವಣೆಯಲ್ಲಿ ಪಕ್ಷವು ಸ್ವಂತವಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಆರು ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಚಕೈ, ಧಮ್ದಹಾ, ಕಟೋರಿಯಾ, ಮಣಿಹರಿ (ಎಸ್‌ಟಿ) ಜಮುಯಿ ಮತ್ತು ಪಿರ್‌ಪೈಂಟಿ (ಎಸ್‌ಸಿ) ಸ್ಥಾನಗಳಲ್ಲಿ ಸ್ಪರ್ಧಿಸಲಿದೆ" ಎಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಹೇಳಿದ್ದಾರೆ. ಈ ಸ್ಥಾನಗಳಿಗೆ ನವೆಂಬರ್ 11 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಗೌರವಯುತ ಸಂಖ್ಯೆಯ ಸ್ಥಾನಗಳನ್ನು ಹಂಚಿಕೆ ಮಾಡದಿದ್ದರೆ, ಪಕ್ಷವು ತನ್ನದೇ ಆದ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಜೆಎಂಎಂ ತಿಳಿಸಿತ್ತು. ಮಿತ್ರಪಕ್ಷವಾಗಿ 243 ಸ್ಥಾನಗಳಲ್ಲಿ 12 ಸ್ಥಾನಗಳಿಗೆ ಜೆಎಂಎಂ ಬೇಡಿಕೆಯಿಟ್ಟಿತ್ತು.ಆದರೆ ಮಾತುಕತೆ ವಿಫಲವಾಗಿ ಪ್ರತ್ಯೇಕ ಸ್ಪರ್ಧೆ ಮಾಡಲಿದೆ. 2020 ರಲ್ಲಿ ಸ್ಪರ್ಧಿಸಿದ 19 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದ ಸಿಪಿಐ(ಎಂಎಲ್) ಲಿಬರೇಶನ್ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಈ ಬಾರಿ ಅಷ್ಟೇ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ. ಸಿಪಿಐ, ಮತ್ತು ಸಿಪಿಐ(ಎಂ) ಕೂಡ ಇಂಡಿಯಾ ಮೈತ್ರಿಕೂಟದಲ್ಲಿವೆ. ಮುಖೇಶ್ ಸಾಹ್ನಿಯವರ ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಕೂಡ ಮೈತ್ರಿಕೂಟ ಸೇರಿರುವುದು ಕೆಲ ಕ್ಷೇತ್ರಗಳಲ್ಲಿ ಸೀಟು ಹಂಚಿಕೆಯಲ್ಲಿ ವಿಳಂಬಕ್ಕೆ ಕಾರಣವಾಗಿವೆ.