ಗ್ವಾಲಿಯರ್: ನಿರಂತರ ನಿಷೇಧಾಜ್ಞೆ ನಡುವೆ ಇಲ್ಲಿನ ಹನುಮಾನ್ ದೇವಸ್ಥಾನದಲ್ಲಿ ರಾಮಾಯಣ ಪಠಣ ಸಂದರ್ಭದಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ಹಿರಿಯ ವಕೀಲ ಅನಿಲ್ ಮಿಶ್ರಾ ಮತ್ತು ಮುಖ್ಯ ಪೊಲೀಸ್ ವರಿಷ್ಠಾಧಿಕಾರಿ ಹೀನಾ ಖಾನ್ ನಡುವೆ ತೀವ್ರ ವಾಗ್ವಾದ ನಡೆಯಿತು. ಮಿಶ್ರಾ ಮತ್ತು ಅವರ ಬೆಂಬಲಿಗರು ಪೊಲೀಸ್ ವರಿಷ್ಠಾಧಿಕಾರಿ ಸನಾತನ ಧರ್ಮದ ವಿರೋಧಿ ಎಂದು ಆರೋಪಿಸಿ ಘೋಷಣೆ ಕೂಗಿದಾಗ, ಹೀನಾ ಖಾನ್ ಅವರು "ಜೈ ಶ್ರೀ ರಾಮ್" ಎಂದು ಏರು ಧ್ವನಿಯಲ್ಲಿ ಘೋಷಣೆಗಳನ್ನು ಕೂಗಿ ಎಲ್ಲರನ್ನು ದಂಗುಬಡಿಸಿದರು. ಮಿಶ್ರಾ ಮತ್ತು ಅವರ ಬೆಂಬಲಿಗರು ಸಿಟಿ ಸೆಂಟರ್ ಪ್ರದೇಶದಲ್ಲಿ ರಾಮಚರಿತಮಾನಸ ಪಠಣಕ್ಕಾಗಿ ಟೆಂಟ್ ತಂದ ನಂತರ ವಿವಾದ ಭುಗಿಲೆದ್ದಿದೆ. ಆದರೆ ಹೀನಾ ಖಾನ್ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಸಿಬಂದಿ ಟೆಂಟ್ ಸಾಮಗ್ರಿಗಳನ್ನು ತೆರವುಗೊಳಿಸಿ ಕಾರ್ಯಕ್ರಮ ಮುಂದುವರಿಸಲು ಅನುಮತಿ ನೀಡಲಿಲ್ಲ. ಗ್ವಾಲಿಯರ್ ನಲ್ಲಿರುವ ನ್ಯಾಯಾಲಯ ಸಂಕೀರ್ಣದಲ್ಲಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆಯ ಸುತ್ತಲಿನ ವಿವಾದ ಮುಂದುವರೆದಿದ್ದು, ವಕೀಲರ ಒಂದು ಗುಂಪು ವಿರೋಧಿಸುತ್ತಿದ್ದು ಉದ್ವಿಗ್ನತೆ ಮುಂದುವರೆದಿದೆ. ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ಅವರ ಹೇಳಿಕೆಗಳು ಪ್ರತಿಮೆ ಸ್ಥಾಪನೆಯ ಪರವಾಗಿದ್ದವರನ್ನು ಕೆರಳಿಸಿದ್ದು, ಮುನ್ನೆಚ್ಚರಿಕೆಯಾಗಿ, ಪೊಲೀಸರು ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.