image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬಿಹಾರ ರಾಜಕಾರಣದಲ್ಲಿ ಸಂಚಲನ; ಸ್ಪರ್ಧೆಯಿಂದ ಹಿಂದೆ ಸರಿದ ಪ್ರಶಾಂತ್ ಕಿಶೋರ್

ಬಿಹಾರ ರಾಜಕಾರಣದಲ್ಲಿ ಸಂಚಲನ; ಸ್ಪರ್ಧೆಯಿಂದ ಹಿಂದೆ ಸರಿದ ಪ್ರಶಾಂತ್ ಕಿಶೋರ್

ಬಿಹಾರ : ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಪಕ್ಷ ಸಂಘಟನೆಯ ಮೇಲೆ ಸಂಪೂರ್ಣವಾಗಿ ಗಮನಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಚುನಾವಣಾ ಚಾಣಕ್ಯ, ಜನ್ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್, ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ತಮ್ಮದು ಹೊಸ ರಾಜಕೀಯ ಪಕ್ಷ, ಹೆಚ್ಚಿನ ಒಳಿತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಶಾಂತ್ ಕಿಶೋರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್, ಬಿಹಾರ ರಾಜಕಾರಣದ ಕುರಿತು ಮಾತನಾಡಿದ್ದಾರೆ. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪ್ರತಿನಿಧಿಸುವ ರಾಘೋಪುರ ವಿಧಾನಸಭಾ ಕ್ಷೇತ್ರದಿಂದ ಪ್ರಶಾಂತ್ ಕಿಶೋರ್ ಸ್ಪರ್ಧಿಸುತ್ತಾರೆ ಎಂದು ವರದಿಯಾಗಿತ್ತು. ಜನ ಸುರಾಜ್ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದೆ. 2ನೇ ಪಟ್ಟಿಯ 65 ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರಶಾಂತ್ ಕಿಶೋರ್ ಹೆಸರು ಇರಲಿಲ್ಲ. ತೇಜಸ್ವಿ ಯಾದವ್ ವಿರುದ್ಧ ಜನ್ ಸುರಜ್ ಪಕ್ಷದಿಂದ ಚಂಚಲ್ ಸಿಂಗ್ ಸ್ಪರ್ಧೆ ಮಾಡುತ್ತಿದ್ದಾರೆ. 

ನಾನು ಸ್ಪರ್ಧೆ ಮಾಡಬಾರದು ಎಂದು ಪಕ್ಷ ನಿರ್ಧಾರ ತೆಗೆದುಕೊಂಡಿದ್ದು, ಇದಕ್ಕೆ ಬದ್ಧವಾಗಿದ್ದೇನೆ. ಪಕ್ಷದ ಹಿತಾಸಕ್ತಿ ಹಿನ್ನೆಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ನಾನು ಚುನಾವಣೆಗೆ ಸ್ಪರ್ಧಿಸಿದ್ರೆ ಪಕ್ಷ ಸಂಘಟನೆ ಕೆಲಸಗಳಿಂದ ದೂರವಾಗಬೇಕಾಗುತ್ತದೆ. ಆದ್ದರಿಂದ ವೈಯಕ್ತಿಕ ಚುನಾವಣೆಯಿಂದ ದೂರ ಉಳಿಯುತ್ತಿರೋದಾಗಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಚುನಾವಣೆಯೇ ನಾನೇ ನಿಖರವಾಗಿ ಇಷ್ಟೇ ಗೆಲ್ಲುತ್ತೇನೆ ಅಥವಾ ಇಲ್ಲಿಯೇ ಸೋಲು ಎಂದು ಹೇಳಲ್ಲ. 10ಕ್ಕಿಂತ ಅಧಿಕ 150ಕ್ಕಿಂತ ಕಡಿಮೆ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ನಮ್ಮ ಮುಂದಿದೆ. ಒಂದು ವೇಳೆ ನಮಗೆ ಹೆಚ್ಚು ಸೀಟ್ ಸಿಗದಿದ್ರೆ ನಾವು ಜನರ ವಿಶ್ವಾಸವನ್ನು ಸಂಪಾದಿಸಿಲ್ಲ ಎಂದರ್ಥ. ಆದರೆ ನಮ್ಮ ರಾಜಕೀಯದ ಪಯಣ ಮುಂದುವರಿಯುತ್ತದೆ ಎಂದು ಪ್ರಶಾಂತ್ ಕಿಶೋರ್ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಸಿಎಂ ನಿತೀಶ್ ಕುಮಾರ್ ಅವರ ಜೆಡಿ(ಯು) 25 ಕ್ಷೇತ್ರಗಳಲ್ಲಿ ಗೆಲ್ಲೋದು ಸಹ ಅನುಮಾನ. ಎನ್‌ಡಿಎ ಒಕ್ಕೂಟದಲ್ಲಿಯೂ ಎಲ್ಲವೂ ಸರಿಯಾಗಿಲ್ಲ. ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಜೆಡಿಯು ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ. ಇನ್ನು ಚಿರಾಗ್ ಪಾಸ್ವಾನ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನೇಕ ಕ್ಷೇತ್ರಗಳಲ್ಲಿ ಅಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಿದ್ದರು. ಈ ಬಾರಿ ಕ್ಷೇತ್ರ ಹಂಚಿಕೆಗೂ ಮುನ್ನವೇ ಚಿರಾಗ್ ಪಾಸ್ವಾನ್ ಬಂಡಾಯ ಕಿಚ್ಚು ಹಚ್ಚಿದ್ದರು. ಈ ಕಿಚ್ಚು ಎನ್‌ಡಿಎಗೆ ಅಪಾಯಕಾರಿ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜನ್ ಸುರಾಜ್ ಗೆದ್ರೆ ಇದು ರಾಷ್ಟ್ರ ರಾಜಕಾರಣದ ಮೇಲೆ ಪರಿಣಾಮ ಬೀರಲಿದೆ. ಇದು ಪಕ್ಷದ ವಿಸ್ತರಣೆಗೆ ನಾಂದಿಯಾಗಲಿದೆ. ಈ ಗೆಲುವು ರಾಷ್ಟ್ರ ರಾಜಕಾರಣಕ್ಕೆ ಹೊಸ ದಿಕ್ಸೂಚಿಯಾಗಲಿದೆ ಎಂದು ಹೇಳಿದ್ದಾರೆ. ನವೆಂಬರ್ 6 ಮತ್ತು 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ.

Category
ಕರಾವಳಿ ತರಂಗಿಣಿ