image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಬೆಂಗಳೂರು ಸೆಂಟ್ರಲ್ ವೋಟರ್ಸ್ ಲಿಸ್ಟ್ ಅಕ್ರಮ: ಎಸ್​ಐಟಿ ತನಿಖೆಗೆ ನಿರಾಕರಿಸಿದ ಸುಪ್ರೀಂ

ಬೆಂಗಳೂರು ಸೆಂಟ್ರಲ್ ವೋಟರ್ಸ್ ಲಿಸ್ಟ್ ಅಕ್ರಮ: ಎಸ್​ಐಟಿ ತನಿಖೆಗೆ ನಿರಾಕರಿಸಿದ ಸುಪ್ರೀಂ

ನವದೆಹಲಿ : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎನ್ನುವ ಆರೋಪದ ಮೇಲೆ ಎಸ್​ಐಟಿಯಿಂದ ತನಿಖೆ ನಡೆಸಬೇಕು ಎಂದು ಮಾಡಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮನವಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜಯಮಾಲ್ಯ ಬಾಗಚಿ ಅವರಿದ್ದ ಸರ್ವೋಚ್ಚ ನ್ಯಾಯಪೀಠ, ಎಸ್​ಐಟಿಗೆ ತನಿಖೆ ವಹಿಸಲು ನಿರಾಕರಿಸಿತು. ಈ ವಿಷಯವನ್ನು ಭಾರತೀಯ ಚುನಾವಣಾ ಆಯೋಗದಲ್ಲಿ ಬಗೆಹರಿಸಿಕೊಳ್ಳಬೇಕೆಂದು ಅರ್ಜಿದಾರರಿಗೆ ಕೋರ್ಟ್ ಸೂಚಿಸಿತು. ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿರುವುದರ ಸಂಬಂಧ ಚುನಾವಣಾ ಆಯೋಗದಲ್ಲಿ ದೂರು ಸಲ್ಲಿಸಿ ಎಂದು ಕೋರ್ಟ್ ಸೂಚಿಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು ಉತ್ತರಿಸಿ, ಚುನಾವಣಾ ಆಯೋಗಕ್ಕೆ ದೂರು ಕೊಡಲಾಗಿದ್ದು, ಇನ್ನೂ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ವಾದಿಸಿದರು.

ಚುನಾವಣಾ ಆಯೋಗ ಯಾವಾಗ ಕ್ರಮ ಕೈಗೊಳ್ಳಬೇಕು ಎಂದು ಒಂದು ಗಡುವು ನಿಗದಿ ಮಾಡಬೇಕು ಎಂದೂ ಅರ್ಜಿದಾರರು ಸರ್ವೋಚ್ಚ ನ್ಯಾಯಪೀಠಕ್ಕೆ ಮನವಿಯನ್ನೂ ಮಾಡಿದರು. ಕೋರ್ಟ್ ಈ ಮನವಿಯನ್ನೂ ತಿರಸ್ಕರಿಸಿತು. 'ಅರ್ಜಿದಾರರ ವಕೀಲರ ವಾದ ಆಲಿಸಿದೆವು. ಸಾರ್ವಜನಿಕ ಹಿತಾಸಕ್ತಿಯಿಂದ ಅರ್ಜಿ ಸಲ್ಲಿಸಲಾಗಿದೆ. ಆದರೆ, ಅರ್ಜಿಯನ್ನು ಪುರಸ್ಕರಿಸದಿರಲು ನಿರ್ಧರಿಸಿದ್ದೇವೆ. ಚುನಾವಣಾ ಆಯೋಗದಲ್ಲಿ ಪ್ರಕರಣ ತೆಗೆದುಕೊಂಡು ಹೋಗಬೇಕೆಂದು ಅರ್ಜಿದಾರರಿಗೆ ಸಲಹೆ ನೀಡಿದ್ದೇವೆ' ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೊಯಮಾಲ್ಯ ಬಾಗಚಿ ಅವರಿದ್ದ ನ್ಯಾಯಪೀಠ ತಿಳಿಸಿತು. 2024ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗಷ್ಟೇ ಆರೋಪಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದೂ ಹೇಳಿ, ದೇಶಾದ್ಯಂತ ಮತಕಳ್ಳತನ ಅಭಿಯಾನವನ್ನೇ ಆರಂಭಿಸಿದ್ದರು. ಈ ಆರೋಪ ಸಂಬಂಧ ಅಕ್ರಮದ ಬಗ್ಗೆ ವಿಶೇಷ ತನಿಖೆ ನಡೆಸಲು ನಿರ್ದೇಶನ ನೀಡಬೇಕು ಎಂದು ಕೋರಿ ರೋಹಿತ್ ಪಾಂಡೆ ಎಂಬುವವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

Category
ಕರಾವಳಿ ತರಂಗಿಣಿ