ನವದೆಹಲಿ : ದೀಪಾವಳಿಗೆ ಮುನ್ನ ಪ್ರಮುಖ ಸುಧಾರಣಾ ಕ್ರಮ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ನೀತಿ ಆಯೋಗ್ ಸಿಇಒ ಬಿ.ವಿ.ಆರ್. ಸುಬ್ರಹ್ಮಣ್ಯಂ ಹೇಳಿದ್ದಾರೆ. ಸರ್ಕಾರ ಇತ್ತೀಚೆಗಷ್ಟೇ ಜಿಎಸ್ಟಿಯಲ್ಲಿ ಸುಧಾರಣೆ ತಂದಿತ್ತು. ಬಹಳಷ್ಟು ಸರಕುಗಳ ಮೇಲಿನ ತೆರಿಗೆ ಗಣನೀಯವಾಗಿ ಇಳಿಕೆ ಆಗಿತ್ತು. ಬಹುತೇಕ ಎಲ್ಲಾ ವಲಯದಿಂದಲೂ ಜಿಎಸ್ಟಿ 2.0 ಕ್ರಮಕ್ಕೆ ಸ್ವಾಗತ ಸಿಕ್ಕಿದೆ. ಈಗ ಮ್ಯಾನುಫ್ಯಾಕ್ಚರಿಂಗ್ನಲ್ಲಿ ದಾಪುಗಾಲಿಡಲು ಸಜ್ಜಾಗಿರುವ ಭಾರತ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಎದುರು ನೋಡುತ್ತಿದೆ. ದೀಪಾವಳಿಗೆ ಮುನ್ನ ಒಂದು ದೊಡ್ಡ ಘೋಷಣೆ ಆಗಬಹುದು ಎನ್ನುವ ಸುಳಿವನ್ನು ನೀತಿ ಆಯೋಗ್ ಸಿಇಒ ಬಿಚ್ಚಿಟ್ಟಿದ್ದಾರೆ. ಸರ್ಕಾರದ ಮುಂದೆ ಹಲವು ಸುಧಾರಣಾ ಕ್ರಮಗಳ ಪ್ರಸ್ತಾಪ ಇದೆ. ನೀತಿ ಆಯೋಗ್ ಸದಸ್ಯರಾದ ರಾಜೀವ್ ಗೌಬ ನೇತೃತ್ವದ ಎರಡು ಸಮಿತಿಗಳು ಈಗಾಗಲೇ ಈ ಕ್ರಮಗಳ ಕುರಿತಾಗಿ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿವೆ. ಮುಂದಿನ ತಲೆಮಾರಿನ ಸುಧಾರಣೆಗಳನ್ನು ಉತ್ತೇಜಿಸಲು ಬೇಕಾದ ಕ್ರಮಗಳನ್ನು ಅವಲೋಕಿಸಲು ಒಂದು ಸಮಿತಿ ಇದೆ. ವಿಕಸಿತ್ ಭಾರತ್ ಗುರಿಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಮತ್ತೊಂದು ಸಮಿತಿ ಅವಲೋಕಿಸುತ್ತಿದೆ. ಇವೆರೆಡಕ್ಕೂ ರಾಜೀವ್ ಗೌಬ ನೇತೃತ್ವ ವಹಿಸಿಕೊಂಡಿದ್ದಾರೆ.
ಆಮದುಗಳ ಮೇಲೆ ಭಾರತ ವಿಧಿಸುತ್ತಿರುವ ಸುಂಕವನ್ನು ಕಡಿಮೆ ಮಾಡಬೇಕು. ನಾನ್-ಟ್ಯಾರಿಫ್ ತಡೆಗಳೆಲ್ಲವನ್ನೂ ನಿವಾರಿಸಬೇಕು. ಮಾರುಕಟ್ಟೆಯನ್ನು ಮುಕ್ತವಾಗಿ ತೆರೆಯುವುದರಿಂದ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನಲ್ಲಿ ಸ್ಪರ್ಧಾತ್ಮಕತೆ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ನೀತಿ ಆಯೋಗ್ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಉತ್ಪಾದಾನಾ ನೀತಿ ಜಾರಿಗೆ ಬರಲಿದ್ದು, ಈ ವಿಚಾರಗಳ ಬಗ್ಗೆ ಸರ್ಕಾರ ಗಮನ ವಹಿಸಬಹುದು. ಭಾರತದಲ್ಲಿ ವಿಶ್ವದರ್ಜೆಯ ಇಕೋಸಿಸ್ಟಂ ನಿರ್ಮಾಣದ ಗುರಿ ಹೊಂದಿರಬೇಕು ಎಂದು ಅವರು ಹೇಳಿದ್ದಾರೆ.