image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಾಜಿ ಸಿಜೆಐ ಚಂದ್ರಚೂಡ್ ಹೇಳಿಕೆಗಳ ಆಧಾರದ ಮೇಲೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಅವಕಾಶವಿದೆ : ಕಾನೂನು ತಜ್ಞರು

ಮಾಜಿ ಸಿಜೆಐ ಚಂದ್ರಚೂಡ್ ಹೇಳಿಕೆಗಳ ಆಧಾರದ ಮೇಲೆ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಅವಕಾಶವಿದೆ : ಕಾನೂನು ತಜ್ಞರು

ಹೈದೆರಾಬಾದ್ : ಅಯೋಧ್ಯೆಯ ರಾಮ ಮಂದಿರ-ಬಾಬರಿ ಮಸೀದಿ ವಿವಾದ ಕುರಿತಾಗಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೀಡಿದ ಇತ್ತೀಚಿನ ಹೇಳಿಕೆಗಳು ಕಾನೂನು ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಈ ಹೇಳಿಕೆಗಳ ಆಧಾರದ ಮೇಲೆ 2019ರ ಅಯೋಧ್ಯೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಸಾಧ್ಯವಿದೆ ಎಂದು ಕಾನೂನು ತಜ್ಞ ಹಾಗೂ ಪ್ರಾಧ್ಯಾಪಕ ಜಿ. ಮೋಹನ್ ಗೋಪಾಲ್ ಹೇಳಿದ್ದಾರೆ. 2019ರಲ್ಲಿ ಅಂದಿನ ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಐದು ಸದಸ್ಯರ ಸಂವಿಧಾನ ಪೀಠ (ನ್ಯಾಯಮೂರ್ತಿಗಳು ಎಸ್.ಎ. ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಝೀರ್) ನೀಡಿದ ತೀರ್ಪಿನಲ್ಲಿ, ಮುಸ್ಲಿಂ ಅರ್ಜಿದಾರರು ವಿವಾದಿತ ಸ್ಥಳದ ನಿರಂತರ ಸ್ವಾಧೀನವನ್ನು ಸಾಬೀತುಪಡಿಸಲು ವಿಫಲವಾಗಿದ್ದಾರೆ ಎಂದು ಉಲ್ಲೇಖಿಸಿ ಸಮತೋಲನದ ಆಧಾರದ ಮೇಲೆ ವಿವಾದಿತ ಜಾಗವನ್ನು ಹಿಂದೂ ಅರ್ಜಿದಾರರಿಗೆ ಹಸ್ತಾಂತರಿಸಲಾಯಿತು. ಆದರೆ ತೀರ್ಪಿನಲ್ಲಿ "ಬಾಬರಿ ಮಸೀದಿ ಹಿಂದಿನ ದೇವಾಲಯವನ್ನು ಧ್ವಂಸ ಮಾಡಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದೂ ಉಲ್ಲೇಖಿಸಲಾಯಿತು.

ಆದರೆ ಇತ್ತೀಚೆಗೆ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರಿಗೆ ನೀಡಿದ ಸಂದರ್ಶನದಲ್ಲಿ, ಮಾಜಿ ಸಿಜೆಐ ಚಂದ್ರಚೂಡ್ ಅವರು "ಬಾಬರಿ ಮಸೀದಿ ನಿರ್ಮಾಣವೇ ಹಿಂದಿನ ದೇವಾಲಯವನ್ನು ಅಪವಿತ್ರಗೊಳಿಸುವ ಕೃತ್ಯ" ಎಂದು ಹೇಳಿದ್ದಾರೆ. ತೀರ್ಪಿನಲ್ಲಿ ದಾಖಲಾದ ಅಂಶಗಳಿಗೆ ವಿರುದ್ಧವಾಗಿರುವ ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಯಿತು. ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ನಡೆದ ಸಿಎಚ್ ಮೊಹಮ್ಮದ್ ಕೋಯಾ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಪ್ರೊ. ಗೋಪಾಲ್, "ನ್ಯಾಯಾಲಯದ ತೀರ್ಪು ವಿಶ್ವಾಸಾರ್ಹವಾಗಿರಬೇಕು. ನನ್ನ ಅಭಿಪ್ರಾಯದಲ್ಲಿ ಅಯೋಧ್ಯೆ ತೀರ್ಪು ತಪ್ಪಾಗಿದೆ. ಚಂದ್ರಚೂಡ್ ಅವರ ಹೇಳಿಕೆಗಳ ಆಧಾರದ ಮೇಲೆ ನಾವು ಕ್ಯುರೇಟಿವ್ ಅರ್ಜಿ ಸಲ್ಲಿಸಬೇಕೇ ಎಂಬ ಪ್ರಶ್ನೆ ಎದುರಾಗಿದೆ. ಬಹುಶಃ ಸಲ್ಲಿಸಬೇಕಾಗಬಹುದು" ಎಂದು ಅಭಿಪ್ರಾಯಪಟ್ಟರು. "ಈ ವಿಷಯವನ್ನು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬಳಸಬೇಕು. ಜನರಿಗೆ ನಿಜವಾಗಿ ಏನಾಯಿತು ಎಂಬುದನ್ನು ತಿಳಿಸಲು ಮತ್ತು ಮರು ವಿಚಾರಣೆಗೆ ಒತ್ತಾಯಿಸಲು ಇದು ಸೂಕ್ತ ಸಂದರ್ಭವಾಗಿದೆ" ಎಂದು ಅವರು ಹೇಳಿದ್ದಾರೆ. ತೀರ್ಪಿನ ಮರು ಪರಿಶೀಲನ ಅರ್ಜಿ ವಜಾಗೊಂಡ ನಂತರವೂ ನ್ಯಾಯಕ್ಕಾಗಿ ಅರ್ಜಿದಾರರು ಸಲ್ಲಿಸಬಹುದಾದ ವಿಶೇಷ ಕಾನೂನು ಮಾರ್ಗವೆಂದರೆ ಕ್ಯುರೇಟಿವ್ ಅರ್ಜಿ. ಭಾರತದ ಸರ್ವೋಚ್ಚ ನ್ಯಾಯಾಲಯವು 2002ರಲ್ಲಿ ನೀಡಿದ ರೂಪಾ ಅಶೋಕ್ ಹುರ್ರಾ ವಿರುದ್ಧ ಅಶೋಕ್ ಹುರ್ರಾ ಮತ್ತು ಇತರರು ಪ್ರಕರಣದ ತೀರ್ಪಿನಲ್ಲೇ ಈ ಪರಿಕಲ್ಪನೆಗೆ ಆಕಾರ ನೀಡಿತ್ತು.

Category
ಕರಾವಳಿ ತರಂಗಿಣಿ