image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

H1 ಬಿ ವೀಸಾ : ಹೂಡಿಕೆದಾರರು ಮತ್ತು ಬಿಲಿಯನೇರ್‌ಗಳಿಂದ ಟ್ರಂಪ್‌ ಆಡಳಿತಕ್ಕೆ ಎಚ್ಚರಿಕೆ!

H1 ಬಿ ವೀಸಾ : ಹೂಡಿಕೆದಾರರು ಮತ್ತು ಬಿಲಿಯನೇರ್‌ಗಳಿಂದ ಟ್ರಂಪ್‌ ಆಡಳಿತಕ್ಕೆ ಎಚ್ಚರಿಕೆ!

ಅಮೇರಿಕ : H-1B ವೀಸಾ ಅರ್ಜಿ ಶುಲ್ಕ ಹೆಚ್ಚಳ ಮಾಡುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನಿರ್ಧಾರದ ವಿರುದ್ಧ, ಅಮೆರಿಕದಲ್ಲೇ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದು, ಈ ಕುರಿತು ಅನೇಕ ಹೂಡಿಕೆದಾರರು ಮತ್ತು ಬಿಲಿಯನೇರ್‌ಗಳು ಟ್ರಂಪ್‌ ಆಡಳಿತಕ್ಕೆ ಎಚ್ಚರಿಕೆ ನೀಡಲಾರಂಭಿಸಿದ್ದಾರೆ. ಈ ಕುರಿತು ಮಾತನಾಡಿರುವ ಅಮರಿಕದ ಖ್ಯಾತ ಬಿಲಿಯನೇರ್‌ ಮತ್ತು ಸಿಲಿಕಾನ್‌ ವ್ಯಾಲಿ ಹೂಡಿಕೆದಾರ ಮೈಕೆಲ್‌ ಮೊರಿಟ್ಜ್‌, "H-1B ವೀಸಾ ಅರ್ಜಿಗಳ ಶುಲ್ಕವನ್ನು 1 ಲಕ್ಷ ಅಮೆರಿಕನ್‌ ಡಾಲರ್‌ಗೆ ಏರಿಕೆ ಮಾಡಿರುವುದು ತಪ್ಪು ನಿರ್ಧಾರ" ಎಂದು ಅಭಿಪ್ರಾಯಪಟ್ಟಿದ್ದಾರೆ. H-1B ವೀಸಾ ವಿವಾದವನ್ನು ಅನಗತ್ಯ ಎಂದು ಕರೆದಿರುವ ಮೈಕೆಲ್‌ ಮೊರಿಟ್ಜ್‌, ಇದು ಖಂಡಿತವಾಗಿಯೂ ಅಮೆರಿಕಕ್ಕೆ ತಿರುಗುಬಾಣವಾಗಿ ಪರಿಣಮಿಸಲಿದೆ ಎಂದು ಹೇಳಿದ್ದಾರೆ. ಈ ನೀತಿ ಅಮೆರಿಕದ ಆರ್ಥಿಕತೆಗೆ ಭಾರೀ ಪೆಟ್ಟು ನೀಡಲಿದೆ ಎಂದೂ ಮೊರಿಟ್ಜ್‌ ಅವರು ಟ್ರಂಪ್‌ ಆಡಳಿತವನ್ನು ಎಚ್ಚರಿಸಿದ್ದಾರೆ. "H-1B ವೀಸಾ ಅರ್ಜಿಗಳ ಶುಲ್ಕವನ್ನು ಏರಿಸಿರುವುದು, ಅಮೆರಿಕದ ತಂತ್ರಜ್ಞಾನದ ಯಶಸ್ಸಿಗೆ ಕಾರಣವಾಗುವ ಅಂಶಗಳ ಬಗ್ಗೆ ಟ್ರಂಪ್‌ ಆಡಳಿತದ ಮೂಲಭೂತ ತಪ್ಪುಗ್ರಹಿಕೆಗೆ ಸಾಕ್ಷಿಯಾಗಿದೆ. ದೇಶದ ಐಟಿ ಕ್ಷೇತ್ರದ ಬೆಳವಣಿಗೆಗೆ ವಿದೇಶಿ ಕಾರ್ಮಿಕರ ಅವಶ್ಯಕತೆ ಇದೆ. ಸಿಲಿಕಾನ್‌ ವ್ಯಾಲಿಯ ಭವಿಷ್ಯ ಇದೇ ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರ ಮೇಲೆ ನಿಂತಿದೆ" ಎಂದು ಮೈಕೆಲ್‌ ಮೊರಿಟ್ಜ್‌ ಹೇಳಿದ್ದಾರೆ. ಮುಂದುವರೆದು, "ವಿದೇಶಿ ಕಾರ್ಮಿಕರನ್ನು ದೂರ ತಳ್ಳಿ ದೇಶೀಯ ಕಾರ್ಮಿಕರ ಭರವಸೆಯ ಮೇಲೆ ಸಿಲಿಕಾನ್‌ ವ್ಯಾಲಿಯನ್ನು ನಡೆಸುವುದು ಸಾಧ್ಯವಿಲ್ಲ. ದೇಶದ ಐಟಿ ಕ್ಷೇತ್ರವನ್ನು ಕಾಪಾಡುವ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ನಮ್ಮಲ್ಲಿ ಇದೆಯೇ ಎಂಬ ಪ್ರಶ್ನೆಯನ್ನು ನಾವು ಮೊದಲು ಕೇಳಿಕೊಳ್ಳಬೇಕು" ಎಂದು ಮೈಕೆಲ್‌ ಮೊರಿಟ್ಜ್ ಅವರು ಟ್ರಂಪ್‌ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೆರಿಕದ ತಂತ್ರಜ್ಞಾನ ವಲಯ ಹೇಗೆ ಕಾರ್ಯನಿರ್ವಹಿಸುತ್ತಿದ ಎಂಬುದರ ಸ್ಪಷ್ಟ ಅರಿವು ಟ್ರಂಪ್‌ ಆಡಳಿತಕ್ಕೆ ಇದ್ದಂತಿಲ್ಲ ಎಂದಿರುವ ಮೈಕೆಲ್‌ ಮೊರಿಟ್ಜ್‌, ವಿದೇಶಿ ಕಾರ್ಮಿಕರನ್ನು ಹೊರಹಾಕಿದರೆ, ಸಿಲಿಕಾನ್‌ ವ್ಯಾಲಿಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇದು ಅಂತಿಮವಾಗಿ ಅಮೆರಿಕದ ಆರ್ಥಿಕತೆಗೆ ಭಾರೀ ಪೆಟ್ಟು ನೀಡುತ್ತದೆ" ಎಂದು ಅಮೆರಿಕದ ಖ್ಯಾರ ಬಿಲಿಯನೇರ್‌ ಎಚ್ಚರಿಕೆ ನೀಡಿದ್ದಾರೆ. H-1B ವೀಸಾ ನಿಯಮ ಬದಲಾವಣೆಯಿಂದಾಗಿ ಅಮೆರಿಕದ ಸಿಲಿಕಾನ್‌ ವ್ಯಾಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ತನ್ನ ಕೌಶಲ್ಯಪೂರ್ಣ ವಿದೇಶಿ ಕಾರ್ಮಿಕರನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಯುಎಸ್‌ ಕಂಪನಿಗಳು, ತಮ್ಮ ಕಾರ್ಯಾಚರಣೆ ಪ್ರಕ್ರಿಯೆ ಮೇಲೆ ಇದರಿಂದ ಬೀರಬಹುದಾದ ಪರಿಣಾಮಗಳ ಬಗ್ಗೆ ಚಿಂತಿಸುತ್ತಿದೆ. ಗೂಗಲ್, ಪೇಪಾಲ್, ಲಿಂಕ್ಡ್‌ಇನ್ ಮತ್ತು ಯೂಟ್ಯೂಬ್‌ನಂತಹ ಕಂಪನಿಗಳಲ್ಲಿ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಮೈಕೆಲ್ ಮೊರಿಟ್ಜ್,‌ "ಯುಎಸ್‌ ಕಂಪನಿಗಳು ಅಮೆರಿಕನ್ ಕಾರ್ಮಿಕರನ್ನು ಅಗ್ಗದ ವಿದೇಶಿ ಕಾರ್ಮಿಕರೊಂದಿಗೆ ಬದಲಾಯಿಸಲು H-1B ಕಾರ್ಯಕ್ರಮವನ್ನು ದುರುಪಯೋಗಪಡಿಸಿಕೊಳ್ಳುತ್ತವೆ" ಎಂಬ ಟ್ರಂಪ್ ಆಡಳಿತದ ವಾದವನ್ನು ತಳ್ಳಿ ಹಾಕಿದ್ದಾರೆ. "ಯುಎಸ್‌ ಕಂಪನಿಗಳು ವೆಚ್ಚ ಉಳಿತಾಯಕ್ಕಾಗಿ ವಿದೇಶಿ ಕಾರ್ಮಿಕರನ್ನು ನೇಮಿಸಿಕೊಳ್ಳುವುದಿಲ್ಲ. ಬದಲಿಗೆ ಅವರ ಕೌಶಲ್ಯವನ್ನು ನೋಡಿ ಅವರಿಗೆ ಉದ್ಯೋಗ ನೀಡುತ್ತವೆ. ಈ ಮೂಲಭುತ ಅಂಶವನ್ನು ಟ್ರಂಪ್‌ ಆಡಳಿತ ಉದ್ದೇಶಪೂರ್ವಕವಾಗಿ ಮರೆಯುತ್ತಿದೆ" ಎಂದು ಮೈಕೆಲ್‌ ಮೊರಿಟ್ಜ್‌ ತೀವ್ರ ಅಸಮಾಧಾನ ವ್ಯಕ್ತಪಡಸಿದ್ದಾರೆ.

Category
ಕರಾವಳಿ ತರಂಗಿಣಿ