ಹೊಸದಿಲ್ಲಿ: ರಾಜ್ಯಗಳ ಹಣಕಾಸು ಸ್ಥಿತಿಗತಿ ಕುರಿತು ಇದೇ ಮೊದಲ ಬಾರಿಗೆ ಮಹಾಲೇಖಪಾಲರು (ಸಿಎಜಿ) ಸಿದ್ಧಪಡಿಸಿದ ವರದಿ ಬಿಡುಗಡೆ ಯಾಗಿದ್ದು, 2022- 23ರಲ್ಲಿ ದೇಶದ ಒಟ್ಟು 16 ರಾಜ್ಯಗಳು ವೆಚ್ಚಕ್ಕಿಂತ ಹೆಚ್ಚುವರಿ ಆದಾಯ ಹೊಂದಿವೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ. ಈ ಅವಧಿಯಲ್ಲಿ 12 ರಾಜ್ಯಗಳು ಆದಾಯ ಕೊರತೆ ಎದುರಿಸಿವೆ. ಹೆಚ್ಚುವರಿ ಆದಾಯ ಗಳಿಸಿದ ರಾಜ್ಯಗಳ ಪೈಕಿ ಕರ್ನಾಟಕ 5ನೇ ಸ್ಥಾನದಲ್ಲಿದೆ. 2022-23ರಲ್ಲಿ ಕರ್ನಾಟಕವು ಒಟ್ಟು ವೆಚ್ಚಕ್ಕಿಂತ ಹೆಚ್ಚುವರಿ 13,496 ಕೋರೂ. ಆದಾಯ ಪಡೆದಿದೆ ಎಂದು ವರದಿ ಹೇಳಿದೆ.
37,000 ಕೋಟಿ ರೂ. ಹೆಚ್ಚುವರಿ ಆದಾಯ ಗಳಿಸುವ ಮೂಲಕ 16 ರಾಜ್ಯಗಳ ಪೈಕಿ ಉತ್ತರಪ್ರದೇಶ ಮೊದಲ ಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಗುಜರಾತ್ (19,865 ಕೋಟಿ ರೂ.), 3ನೇ ಸ್ಥಾನದಲ್ಲಿ ಒಡಿಶಾ (19,456 ಕೋಟಿ ರೂ.), 4ನೇ ಸ್ಥಾನದಲ್ಲಿ ಝಾರ್ಖಂಡ್(13,564 ಕೋಟಿ ರೂ.), 5ನೇ ಸ್ಥಾನದಲ್ಲಿ ಕರ್ನಾಟಕ (13,496 ಕೋಟಿ ರೂ.) ಇವೆ. ಅನಂತರದ ಸ್ಥಾನಗಳಲ್ಲಿ ಛತ್ತೀಸ್ಗಢ (8,592 ಕೋಟಿ ರೂ.), ತೆಲಂಗಾಣ (5,944 ಕೋಟಿ ರೂ.), ಉತ್ತರಾಖಂಡ (5310 ಕೋಟಿ ರೂ.), ಮಧ್ಯಪ್ರದೇಶ (4091 ಕೋಟಿ ರೂ.) ಮತ್ತು ಗೋವಾ (2,399 ಕೋಟಿ ರೂ.)ಇವೆ. ಹೆಚ್ಚುವರಿ ಆದಾಯ ಗಳಿಸಿರುವ ರಾಜ್ಯಗಳ ಪೈಕಿ 10 ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಾಗಿವೆ. ಹೆಚ್ಚು ಆದಾಯ ಗಳಿಸಿರುವ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳು ಈ ಹಿಂದೆ ಹಿಂದುಳಿದ ಅಥವಾ "ಬಿಮಾರು' ರಾಜ್ಯಗಳು ಎಂಬ ಕುಖ್ಯಾತಿಯನ್ನು ಗಳಿಸಿದ್ದವು. ಅದೇ ರೀತಿ, ಕೈಗಾರಿಕೆಗಳು ಹೆಚ್ಚಿರುವ ರಾಜ್ಯಗಳೆಂಬ ಖ್ಯಾತಿ ಪಡೆದಿರುವ ತಮಿಳುನಾಡು ಮತ್ತು ಮಹಾರಾಷ್ಟ್ರಗಳು ಆದಾಯ ಕೊರತೆ ಎದುರಿಸುತ್ತಿರುವ 12 ರಾಜ್ಯಗಳ ಪಟ್ಟಿಗೆ ಸೇರಿವೆ.
ಆಂಧ್ರಪ್ರದೇಶ, ತಮಿಳು ನಾಡು, ರಾಜಸ್ಥಾನ, ಪಶ್ಚಿಮ ಬಂಗಾಲ, ಪಂಜಾಬ್, ಹರಿಯಾಣ, ಅಸ್ಸಾಂ, ಬಿಹಾರ, ಕೇರಳ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಮೇಘಾಲಯ ಆದಾಯ ಕೊರತೆಯ ರಾಜ್ಯಗಳು ಎಂದು ಘೋಷಿತವಾಗಿದೆ.