image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ - ವಿನ್ಯಾಸವನ್ನು ತಿರಸ್ಕರಿಸಿದ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ!

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ - ವಿನ್ಯಾಸವನ್ನು ತಿರಸ್ಕರಿಸಿದ ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರ!

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿಗೆ ಬದಲಾಗಿ ಪ್ರಸ್ತಾಪಿಸಲಾದ ಮಸೀದಿಯ ವಿನ್ಯಾಸ ಯೋಜನೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ತಿರಸ್ಕರಿಸಿದೆ. ವಿವಿಧ ಸರ್ಕಾರಿ ಇಲಾಖೆಗಳಿಂದ ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರಗಳು (NOC) ಇಲ್ಲದ ಕಾರಣ ಮಸೀದಿಯ ವಿನ್ಯಾಸ ಯೋಜನೆಯನ್ನು ಅನುಮೋದಿಸಲಾಗಿಲ್ಲ ಎಂದು ಮಾಹಿತಿ ಹಕ್ಕು (RTI) ಪ್ರತಿಕ್ರಿಯೆಯಿಂದ ತಿಳಿದುಬಂದಿದೆ. 2019ರ ನವೆಂಬರ್ 9 ರಂದು, ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ಅಯೋಧ್ಯೆ ತೀರ್ಪು ವರದಿಯ ಪ್ರಕಾರ, ಉತ್ತರ ಪ್ರದೇಶ ಸರ್ಕಾರವು ಅಯೋಧ್ಯೆ ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ಮಸೀದಿ ನಿರ್ಮಾಣ ಮತ್ತು ಇತರ ಸೌಲಭ್ಯಗಳಿಗಾಗಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು.

ಈ ಆದೇಶದ ಅಡಿಯಲ್ಲಿ, 2020ರ ಆಗಸ್ಟ್ 3 ರಂದು, ಆಗಿನ ಅಯೋಧ್ಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ಅವರು ಅಯೋಧ್ಯೆಯ ಬಳಿಯ ಧನ್ನಿಪುರ ಗ್ರಾಮದಲ್ಲಿ ಐದು ಎಕರೆ ಭೂಮಿಯನ್ನು ಸುನ್ನಿ ಕೇಂದ್ರ ವಕ್ಫ್ ಮಂಡಳಿಗೆ ವರ್ಗಾಯಿಸಿದರು. ಮಸೀದಿ ಟ್ರಸ್ಟ್ 2021ರ ಜೂನ್ 23 ರಂದು ಈ ಭೂಮಿಯಲ್ಲಿ ನಿರ್ಮಾಣಕ್ಕಾಗಿ ವಿನ್ಯಾಸ ಯೋಜನೆಯನ್ನು ಅನುಮೋದಿಸಲು ಅರ್ಜಿ ಸಲ್ಲಿಸಿತು. ಆದರೆ ಅಂದಿನಿಂದ ಈ ಯೋಜನೆಯ ಅನುಮೋದನೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಮಸೀದಿಯ ವಿನ್ಯಾಸ ಯೋಜನೆ ವಿವಿಧ ಸರ್ಕಾರಿ ಇಲಾಖೆಗಳಿಂದ ಅಗತ್ಯ ಎನ್‌ಒಸಿಗಳ ಕೊರತೆಯೇ ಅನುಮೋದನೆ ನಿರಾಕರಣೆಗೆ ಕಾರಣವಾಗಿದೆ. ಈ ಪ್ರಮಾಣಪತ್ರಗಳಿಲ್ಲದೆ, ಪ್ರಾಧಿಕಾರವು ಯೋಜನೆಯನ್ನು ಮುಂದುವರಿಸಲು ನಿರಾಕರಿಸಿದೆ. ಆದರೆ ಸುಪ್ರೀಂ ಕೋರ್ಟ್‌ನ ಅದೇ ತೀರ್ಪಿನಡಿಯಲ್ಲಿ ಅನುಮೋದಿಸಲಾದ ರಾಮ ಮಂದಿರದ ನಿರ್ಮಾಣ ವೇಗವಾಗಿ ನೆರವೇರಿದೆ. ಆದರೆ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಅಥವಾ ಮಸೀದಿ ಟ್ರಸ್ಟ್‌ನಿಂದ ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

ಇನ್ನು ಈ ವಿಷಯದಲ್ಲಿ ಮುಂದಿನ ಪ್ರಕ್ರಿಯೆ ಅಥವಾ ಸಮಯದ ಕುರಿತು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರವು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ರಾಮ ಮಂದಿರ ನಿರ್ಮಾಣ ಕಾರ್ಯವು ವೇಗವಾಗಿ ಪ್ರಗತಿಯಲ್ಲಿದ್ದು, ಮಸೀದಿ ಯೋಜನೆಯು ಇನ್ನೂ ಆರಂಭಿಕ ಹಂತಗಳಲ್ಲಿ ಸಿಲುಕಿಕೊಂಡಿರುವುದರಿಂದ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ. ಈ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯೋಜನೆಯನ್ನು ವೇಗಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಮಸೀದಿ ಟ್ರಸ್ಟ್‌ನ ಕಾರ್ಯದರ್ಶಿ ಅಥರ್ ಹುಸೇನ್ ಮಾತನಾಡಿ, ಸುಪ್ರೀಂ ಕೋರ್ಟ್ ಮಸೀದಿಗೆ ಭೂಮಿ ಮಂಜೂರು ಮಾಡಲು ಆದೇಶಿಸಿತ್ತು ಮತ್ತು ಉತ್ತರ ಪ್ರದೇಶ ಸರ್ಕಾರ ನಮಗೆ ನಿವೇಶನ ಮಂಜೂರು ಮಾಡಿತು. ಸರ್ಕಾರಿ ಇಲಾಖೆಗಳು ಎನ್‌ಒಸಿ ನೀಡದಿರುವುದು ಮತ್ತು ಪ್ರಾಧಿಕಾರವು ಮಸೀದಿಯ ವಿನ್ಯಾಸ ಯೋಜನೆಯನ್ನು ತಿರಸ್ಕರಿಸಿದ್ದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಇದು ಆಶ್ಚರ್ಯಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ