ಗುಜರಾತ್: ತವರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ ನಡೆಸಿದರು. ರೋಡೋ ಶೋನಲ್ಲಿ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಭವ್ಯ ಸ್ವಾಗತ ಕೋರಿದರು. ರೋಡ್ ಶೋ ಬಳಿಕ 'ಸಮುದ್ರ ಸೆ ಸಮೃದ್ಧಿ' ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗಿ, ₹34,200 ಕೋಟಿಯ ವಿವಿಧ ಅಭಿವೃದ್ಧಿ ಯೋಜನೆಗೆ ಅವರು ಶಂಕು ಸ್ಥಾಪನೆ ಮಾಡಿದರು. ಈ ವೇಳೆ ಸಮಾವೇಶದಲ್ಲಿ ನೆರೆದ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದು, ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿದರು. ಭಾರತದ ಎಲ್ಲಾ ಸಮಸ್ಯೆಗಳಿಗೆ ಒಂದೇ ಒಂದು ಔಷಧವಿದ್ದು ಅದು ಆತ್ಮನಿರ್ಭರವಾಗಿದೆ. ಸೆಮಿಕಂಡಕ್ಟರ್ ಚಿಪ್ಗಳಾಗಲಿ, ಹಡಗುಗಳಾಗಲಿ ಅವು ಭಾರತದಲ್ಲಿ ತಯಾರಿಸಬೇಕು. ಬೇರೆ ದೇಶಗಳ ಮೇಲಿನ ಅವಲಂಬನೆ ನಮ್ಮ ದೊಡ್ಡ ಶತ್ರುವಾಗಿದೆ. ಇದಕ್ಕೆ ಸ್ವಾವಲಂಬಿ ಭಾರತ ಒಂದೇ ಪರಿಹಾರ. ಇದು ನೂರು ದುಃಖಗಳನ್ನು ದೂರ ಮಾಡುತ್ತದೆ ಎಂದು ಅವರು ಹೇಳಿದರು. ಜಾಗತಿಕ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ, ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವು ಆತ್ಮನಿರ್ಭರವಾಗಬೇಕು. ನಾವು ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ದೇಶದ ಅಭಿವೃದ್ಧಿಯ ನಿರ್ಣಯವನ್ನು ನಾವು ಇತರರ ಅವಲಂಬನೆಗೆ ಬಿಡಲು ಸಾಧ್ಯವಿಲ್ಲ. ಭವಿಷ್ಯದ ಪೀಳಿಗೆಯ ಭವಿಷ್ಯವನ್ನು ನಾವು ಪಣಕ್ಕಿಡಲು ಸಾಧ್ಯವಿಲ್ಲ ಎಂದರು. ಈ ಕಾರ್ಯಕ್ರಮದ ಬಳಿಕ ಧೋಲೇರಾದ ವೈಮಾನಿಕ ಸಮೀಕ್ಷೆಯನ್ನು ನಡೆಸಿ, ಲೋಥಾಲ್‌ನಲ್ಲಿರುವ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು.
ಸಾಗರೋತ್ತರ ವಲಯಕ್ಕೆ ಸಂಬಂಧಿಸಿ 7,870 ಕೋಟಿಯ ವಿವಿಧ ಯೋಜನೆಗಳಿಗೆ ಅವರು ಶಂಕು ಸ್ಥಾಪನೆ ಮಾಡಲಿದ್ದಾರೆ. ಹಾಗೇ ಇಂದಿರಾ ಡಾಕ್‌ನಲ್ಲಿ ಮುಂಬೈ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ ಹಲವು ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಬದ್ಧತೆಗೆ ಅನುಗುಣವಾಗಿ, ಪ್ರಧಾನಿ ಮೋದಿ ಗುಜರಾತ್‌ನ ವಿವಿಧ ವಲಯಗಳಿಗೆ ಸೇವೆ ಸಲ್ಲಿಸುವ 26,354 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಹು ಯೋಜನೆಗಳನ್ನು ಉದ್ಘಾಟಿಸಿ ಶಂಕುಸ್ಥಾಪನೆ ಮಾಡಿದರು ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಛಾರಾ ಬಂದರಿನಲ್ಲಿ ಹೆಚ್ಪಿಎಲ್ಎನ್ಜಿ ರೆಗ್ಯಾಸಿಫಿಕೇಶನ್ ಟರ್ಮಿನಲ್, ಗುಜರಾತ್ ಐಒಸಿಎಲ್ ಸಂಸ್ಕರಣಾಗಾರದಲ್ಲಿ ಅಕ್ರಿಲಿಕ್ ಮತ್ತು ಆಕ್ಸೊ ಆಲ್ಕೋಹಾಲ್ ಯೋಜನೆ, 600 ಮೆಗಾವ್ಯಾಟ್ ಗ್ರೀನ್ ಶೂ ಇನಿಶಿಯೇಟಿವ್, ರೈತರಿಗಾಗಿ ಪಿಎಂ ಕುಸುಮ್ 475 ಮೆಗಾವ್ಯಾಟ್ ಕಾಂಪೊನೆಂಟ್ ಸಿ ಸೋಲಾರ್ ಫೀಡರ್, 45 ಮೆಗಾವ್ಯಾಟ್ ಬಡೇಲಿ ಸೋಲಾರ್ ಪಿವಿ ಯೋಜನೆ ಮತ್ತು ಧೋರ್ಡೋ ಗ್ರಾಮದ ಸಂಪೂರ್ಣ ಸೌರೀಕರಣವನ್ನು ಉದ್ಘಾಟಿಸಿದರು.