ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೊಸ ವಲಸಿಗರ ಮೇಲಿನ ಕ್ರಮಕ್ಕೆ ಸಹಿ ಹಾಕಿದ ಬೆನ್ನಲ್ಲೇ ಇದೀಗ ಮೆಟಾ ಮತ್ತು ಮೈಕ್ರೋಸಾಫ್ಟ್‌ಗಳಂತಹ ಟೆಕ್ ದೈತ್ಯ ಕಂಪನಿಗಳು ಶನಿವಾರ ಬೆಳಗ್ಗೆ ಸಭೆ ಸೇರಿ, ತಮ್ಮ ಎಲ್ಲಾ ಹೆಚ್-1ಬಿ ವೀಸಾ (H-1B Visa) ಹೊಂದಿರುವ ಉದ್ಯೋಗಿಗಳಿಗೆ ತಕ್ಷಣಕ್ಕೆ ಅಮೆರಿಕ ತೊರೆಯದಂತೆ ಮನವಿ ಮಾಡಿಕೊಂಡಿವೆ. ವರದಿಗಳ ಪ್ರಕಾರ ಕಂಪನಿಗಳು ಪ್ರಸ್ತುತ ಅಮೆರಿಕದ ಹೊರಗೆ ವಾಸಿಸುತ್ತಿರುವ ತಮ್ಮ ಉದ್ಯೋಗಿಗಳು 24 ಗಂಟೆಗಳ ಒಳಗಾಗಿ ಅಮೆರಿಕಗೆ ವಾಪಸ್ ಬರುವಂತೆ ಕೇಳಿಕೊಂಡಿವೆ. ಜೊತೆಗೆ ಹೆಚ್-1ಬಿ ವೀಸಾ ಹೊಂದಿರುವ ಉದ್ಯೋಗಿಗಳು ಕನಿಷ್ಠ 14 ದಿನಗಳವರೆಗೆ ಅಮೆರಿಕವನ್ನು ತೊರೆಯದಂತೆ ಮನವಿ ಮಾಡಿಕೊಂಡಿವೆ. ತಮ್ಮ ಉದ್ಯೋಗಿಗಳಿಗೆ ಇ-ಮೇಲ್ ಕಳುಹಿಸಿರುವ ಕಂಪನಿಗಳು, ತಮ್ಮ ಭವಿಷ್ಯಕ್ಕಾಗಿ ಈ ನಿರ್ದೇಶನಗಳನ್ನು ಪಾಲಿಸುವಂತೆ ಕೇಳಿಕೊಂಡಿವೆ. ಟೆಕ್ ದೈತ್ಯ ಮೆಟಾ ತನ್ನ ಹೆಚ್-1ಬಿ ವೀಸಾ ಮತ್ತು ಹೆಚ್4 ಸ್ಥಾನಮಾನ ಹೊಂದಿರುವ ವಲಸಿಗ ಉದ್ಯೋಗಿಗಳು ಸರ್ಕಾರದ ಪ್ರಾಯೋಗಿಕ ನಿಯಮಗಳು ಅರ್ಥವಾಗುವವರೆಗೆ ಕನಿಷ್ಠ ಎರಡು ವಾರಗಳ ಕಾಲ ಅಮೆರಿಕದಲ್ಲಿಯೇ ಇರಬೇಕೆಂದು ಸಲಹೆ ನೀಡಿದೆ. ಇದರೊಂದಿಗೆ ಪ್ರಸ್ತುತ ಹೊರಗೆ ವಾಸಿಸುತ್ತಿರುವವರು 24 ಗಂಟೆಗಳ ಒಳಗೆ ಅಮೆರಿಕಕ್ಕೆ ಹಿಂತಿರುಗುವಂತೆ ಕೇಳಿಕೊಂಡಿದೆ.
ಮತ್ತೊಂದೆಡೆ ಮೈಕ್ರೋಸಾಫ್ಟ್ ಅಮೆರಿಕದಲ್ಲಿರುವ ತನ್ನ ಉದ್ಯೋಗಿಗಳಿಗೆ ಮರು ಪ್ರವೇಶ ನಿರಾಕರಣೆಯನ್ನು ತಪ್ಪಿಸಲು ಸ್ಥಳದಲ್ಲಿಯೇ ಇರುವಂತೆ ಬಲವಾಗಿ ಕೇಳಿಕೊಂಡಿದೆ. ದೇಶದ ಹೊರಗಿನ ಉದ್ಯೋಗಿಗಳು ಅಮೆರಿಕಗೆ ಹಿಂತಿರುಗಲು ತಮ್ಮ ಕೈಲಾದಷ್ಟು ಪ್ರಯತ್ನಿಸುವಂತೆಯೂ ಕೇಳಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಅಕ್ರಮ ವಲಸಿಗರ ಮೇಲಿನ ಕ್ರಮಗಳನ್ನು ಮತ್ತಷ್ಟು ಹೆಚ್ಚಿಸಿದ್ದು, ಶುಕ್ರವಾರ ಹೆಚ್-1ಬಿ ವೀಸಾ ಹೊಂದಿರುವವರಿಗೆ ಹೊಸದಾಗಿ ವಾರ್ಷಿಕ 100,000 ಡಾಲರ್ ಶುಲ್ಕವನ್ನು ವಿಧಿಸಲು ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಅಮೆರಿಕದಲ್ಲಿ ಉದ್ಯೋಗದಲ್ಲಿರುವ ವಿದೇಶೀ ವಲಸಿಗರು ಸ್ವದೇಶಕ್ಕೆ ವಾಪಸಾಗಲು ಯೋಚಿಸುತ್ತಿದ್ದು, ಇದು ಟೆಕ್ ಕಂಪನಿಗಳಿಗೆ ನಡುಕವನ್ನು ಹುಟ್ಟಿಸಿದೆ.
ಹೆಚ್-1ಬಿ ವೀಸಾಗಳು ಟೆಕ್ ಕಂಪನಿಗಳು ಅರ್ಹವಾದ ಯುಎಸ್ ನಾಗರಿಕರನ್ನೇ ಅಥವಾ ಅಲ್ಲಿನ ಶಾಶ್ವತ ನಿವಾಸಿಗಳಿಂದ ಉದ್ಯೋಗಿಗಳನ್ನು ತುಂಬಲು ಕಷ್ಟವಾದಾಗ ವಿದೇಶಗಳಿಂದ ಅದರಲ್ಲೂ ಮುಖ್ಯವಾಗಿ ಭಾರತದಿಂದ ಕೌಶಲ್ಯಪೂರ್ಣ ಉದ್ಯೋಗಗಳನ್ನು ಕರೆತರುವ ಉದ್ದೇಶವನ್ನು ಹೊಂದಿದೆ. ಆದರೆ ವಿದೇಶಿ ಉದ್ಯೋಗಿಗಳು ಅಥವಾ ವಲಸಿಗ ಉದ್ಯೋಗಿಗಳಿಗೆ ಕಂಪನಿಗಳು ಕಡಿಮೆ ವೇತನ ನೀಡುತ್ತದೆ. ಒಟ್ಟಾರೆಯಾಗಿ ವಾರ್ಷಿಕವಾಗಿ 60,000 ಡಾಲರ್ ಗಿಂತ ಕಡಿಮೆ ವೇತನಕ್ಕೆ ಕೆಲಸ ಮಾಡಲು ಸಿದ್ಧರಿರುವ ವಿದೇಶಿ ಕಾರ್ಮಿಕರಿಗೆ ಹೆಚ್-1ಬಿ ವೀಸಾಗಳು ಸಹಾಯ ಮಾಡುತ್ತದೆ. ಅದು ಸಾಮಾನ್ಯವಾಗಿ ಯುಎಸ್ ಟೆಕ್ ಕಾರ್ಮಿಕರಿಗೆ ಪಾವತಿಸುವ 100,000 ಡಾಲರ್ ಗಿಂತ ಕಡಿಮೆ ಸಂಬಳವಾಗಿದೆ. ಹೆಚ್-1ಬಿ ವೀಸಾಗಳನ್ನು 1990 ರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಪದವಿ ಪಡೆದ ಜನರಿಗೆ ರಚಿಸಲಾಗಿತ್ತು. ಅದು ಕಂಪನಿಗಳು ತಮ್ಮ ವಿದೇಶೀ ಕಾರ್ಮಿಕರಿಗೆ ಕಡಿಮೆ ವೇತನ ಮತ್ತು ಕಡಿಮೆ ಕಾರ್ಮಿಕ ರಕ್ಷಣೆಯನ್ನು ನೀಡಲು ಅವಕಾಶ ನೀಡುತ್ತದೆ. ಐತಿಹಾಸಿಕವಾಗಿ ಈ ವರ್ಷ 85,000 ವೀಸಾಗಳನ್ನು ಲಾಟರಿ ವ್ಯವಸ್ಥೆಯ ಮೂಲಕ ವಿತರಿಸಲಾಗಿದೆ. ಈ ವರ್ಷ, ಅಮೆಜಾನ್ 10,000 ಕ್ಕೂ ಹೆಚ್ಚು ಹೆಚ್-1ಬಿ ವೀಸಾಗಳನ್ನು ಪಡೆದ ಉದ್ಯೋಗಿಗಳನ್ನು ಹೊಂದಿ ಅಗ್ರಸ್ಥಾನದಲ್ಲಿದೆ. ನಂತರ ಟಾಟಾ ಕನ್ಸಲ್ಟೆನ್ಸಿ, ಮೈಕ್ರೋಸಾಫ್ಟ್, ಆಪಲ್ ಮತ್ತು ಗೂಗಲ್ ಕಂಪನಿಗಳಲ್ಲೂ ಅತಿ ಹೆಚ್ಚು ವಿದೇಶೀ ಉದ್ಯೋಗಿಗಳಿದ್ದಾರೆ. ಯುಸಿಐಎಸ್ ಪ್ರಕಾರ, ಭೌಗೋಳಿಕವಾಗಿ, ಕ್ಯಾಲಿಫೋರ್ನಿಯಾ ಅತಿ ಹೆಚ್ಚು ಹೆಚ್-1ಬಿ ಕಾರ್ಮಿಕರನ್ನು ಹೊಂದಿದೆ.