ಹೊಸದಿಲ್ಲಿ: ''ಯುದ್ಧವನ್ನು ಹೇಗೆ ಆರಂಭಿಸಬೇಕು ಮತ್ತು ಅದನ್ನು ಯಾವ ರೀತಿ ಕ್ಷಿಪ್ರ ಗತಿಯಲ್ಲಿ ಕೊನೆಗಾಣಿಸಬೇಕು ಎಂಬುದನ್ನು ಭಾರತವನ್ನು ನೋಡಿ ಜಗತ್ತು ಪಾಠ ಕಲಿಯಬೇಕು,'' ಎಂದು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಹೇಳಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ನಡೆದ 'ಆಪರೇಷನ್ ಸಿಂಧೂರ' ಸೇನಾ ಕಾರ್ಯಾಚರಣೆಯ ಉದಾಹರಣೆ ಕೊಟ್ಟು ವಿವರಿಸಿರುವ ಸಿಂಗ್, ''ಯುದ್ಧ ಆರಂಭಿಸುವುದು ಸುಲಭ. ಆದರೆ, ಅಂತ್ಯಗೊಳಿಸುವುದು ಕಷ್ಟಸಾಧ್ಯ ಎಂಬುದನ್ನು ಭಾರತ ಸುಳ್ಳು ಮಾಡಿದೆ. ಯುದ್ಧವನ್ನು ಆರಂಭಿಸಿದ ಮೇಲೆ ಆದಷ್ಟು ಬೇಗ ಸಂಘರ್ಷ ಅಂತ್ಯಗೊಳಿಸುವುದು ಹೇಗೆ ಎಂಬ ಕುರಿತು ವಿಶ್ವ ಸಮುದಾಯ ಭಾರತದಿಂದ ಪಾಠ ಕಲಿಯಬೇಕು,'' ಎಂದು ಹೇಳಿದರು. ಇತ್ತೀಚಿಗಷ್ಟೇ ಭಾರತ ಯುದ್ಧತಂತ್ರದ ಮಾರ್ಗಸೂಚಿ ಅಳವಡಿಸಿಕೊಂಡಿದೆ. ''ಮೂರ್ನಾಲ್ಕು ವರ್ಷದಿಂದ ಇಸ್ರೇಲ್-ಹಮಾಸ್, ಉಕ್ರೇನ್-ರಷ್ಯಾ ಸಂಘರ್ಷಗಳು ನಡೆಯುತ್ತಿವೆ. ದಿನಗಳು ಕಳೆದಂತೆ ಸಂಘರ್ಷದ ಕಿಡಿಗಳು ಬೇರೆಬೇರೆ ಪ್ರದೇಶಗಳಿಗೂ ವ್ಯಾಪಿಸುತ್ತಿವೆ. ಯಾವ ದೇಶವೂ ಯುದ್ಧ ಕೊನೆಗಾಣಿಸುವ ಕುರಿತು ಯೋಚಿಸುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಭಾರತದ ನೀತಿಯನ್ನು ವಿಶ್ವ ಸಮುದಾಯ ಅಳವಡಿಸಿಕೊಳ್ಳಬೇಕಿದೆ. ಸಾಧ್ಯವಾದಷ್ಟು ಬೇಗ ಸಂಘರ್ಷ ಅಂತ್ಯಗೊಳಿಸುವತ್ತ ಯೋಚಿಸಬೇಕಿದೆ,'' ಎಂದು ಅಭಿಪ್ರಾಯಪಟ್ಟರು. 'ಕಳೆದ ಮೇ ತಿಂಗಳಲ್ಲಿ ಪಾಕಿಸ್ತಾನ ವಿರುದ್ಧ ಕಾರ್ಯಾಚರಣೆಯನ್ನು ಇನ್ನೂ ಸ್ವಲ್ಪ ಮುಂದುವರಿಸುವ ಆಲೋಚನೆ ಇತ್ತು. ನಮ್ಮ ರಕ್ಷಣಾ ಪಡೆಗಳ ಪ್ರಹಾರಕ್ಕೆ ಬೆದರಿದ ಪಾಕಿಸ್ತಾನ ಹೋರಾಟದಿಂದ ಹಿಂಜರಿಯಿತು. ಕದನ ವಿರಾಮಕ್ಕೆ ಮೊರೆ ಇಟ್ಟಿತು. ಉಗ್ರರ ನೆಲೆ ಧ್ವಂಸಗೊಳಿಸುವ ನಮ್ಮ ಉದ್ದೇಶಿತ ಗುರಿ ಈಡೇರಿದ ಬಳಿಕ ಕ್ಷಿಪ್ರಗತಿಯಲ್ಲಿಯುದ್ಧ ಕೊನೆಗಾಣಿಸಿದೆವು,'' ಎಂದು ಸಿಂಗ್ ತಿಳಿಸಿದರು. ''ಭಾರತ ಅವರ ಮೇಲೆ (ಪಾಕಿಸ್ತಾನ ಬೆಂಬಲಿತ ಉಗ್ರರು) ದಾಳಿ ಮಾಡಬೇಕಿತ್ತು. ನಿರ್ದಿಷ್ಟ ಉದ್ದೇಶದೊಂದಿಗೆ ನಿಖರ ದಾಳಿಯ ಮೂಲಕ ಯಶಸ್ವಿಯಾಗಿ ಕಾರ್ಯಾಚರಣೆ ಪೂರ್ಣಗೊಳಿಸಲಾಯಿತು. ಉದ್ದೇಶ ಈಡೇರಿದ ಮೇಲೆ ಸಂಘರ್ಷ ಮುಂದುವರಿಸುವ ಅವಶ್ಯಕತೆ ನಮಗೆ ಇರಲಿಲ್ಲ. ಸಂಘರ್ಷ ಹೆಚ್ಚು ಮುಂದುವರಿದಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬ ಅರಿವು ನಮಗಿತ್ತು. ಹೀಗಾಗಿ ತ್ವರಿತಗತಿಯಲ್ಲಿ ಯುದ್ಧ ಕೊನೆಗಾಣಿಸಲಾಯಿತು,'' ಎಂದು ವಾಯುಸೇನಾ ಮುಖ್ಯಸ್ಥ ಸಿಂಗ್ ವಿವರಿಸಿದರು. 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ವೇಳೆ ಪಾಕಿಸ್ತಾನ ಬೆಂಬಲಿತ ಉಗ್ರರ ನೆಲೆಗಳ ಮೇಲಿನ ದಾಳಿಗೆ ನಸುಕಿನ ರಾತ್ರಿ 1 ಗಂಟೆಯ ಸಮಯ ಆಯ್ಕೆ ಮಾಡಿಕೊಂಡ ಕಾರಣವನ್ನು ರಕ್ಷಣಾ ಪಡೆ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್ ಬಹಿರಂಗಪಡಿಸಿದ್ದಾರೆ. ''ನಾಗರಿಕರ ಸಾವು ನೋವು ತಡೆಯಲು ಉಗ್ರರ ನೆಲೆಗಳ ಮೇಲೆ ದಾಳಿಗೆ ಮೇ 7 ರಂದು ರಾತ್ರಿ 1 ಗಂಟೆಯಿಂದ 1.30ರ ಸಮಯ ಆಯ್ಕೆ ಮಾಡಿಕೊಳ್ಳಲಾಗಿತ್ತು. ಕೇವಲ 27 ನಿಮಿಷದಲ್ಲಿಕಾರ್ಯಾಚರಣೆ ಕೊನೆಗಾಣಿಸಲಾಗಿತ್ತು,'' ಎಂದು ಅನಿಲ್ ಚೌಹಾಣ್ ಹೇಳಿದರು. ''ಬೆಳಗಿನ ಜಾವ 5.30ರಿಂದ 6 ಗಂಟೆ ನಡುವೆ ಉಗ್ರ ನೆಲೆಗಳ ಮೇಲೆ ದಾಳಿಗೆ ಯೋಚಿಸಲಾಗಿತ್ತು. ಆದರೆ ಈ ವೇಳೆ ಹೆಚ್ಚು ಜನರ ಪ್ರಾರ್ಥನೆಗೆ ಸೇರುವ ವಿಷಯ ತಿಳಿಯಿತು. ಮುಗ್ಧ ಜನರ ಸಾವು ತಡೆಯುವ ಉದ್ದೇಶದಿಂದ ಮಧ್ಯರಾತ್ರಿ ಸಮಯ ಆಯ್ಕೆ ಮಾಡಿಕೊಳ್ಳಲಾಯಿತು,'' ಎಂದು ಚೌಹಾಣ್ ತಿಳಿಸಿದರು.