ನವದೆಹಲಿ: ವಿಶ್ವವಿಖ್ಯಾತ ಮೈಸೂರು ದಸರಾ-2025ರ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿತು. ಸೆಪ್ಟೆಂಬರ್ 22ರಂದು ಉತ್ಸವ ಪ್ರಾರಂಭವಾಗಲಿದ್ದು, ಈ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ಅವರಿದ್ದ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ಒತ್ತಾಯಿಸಿದರು. ಮೈಸೂರಿನಲ್ಲಿನ ಚಾಮುಂಡೇಶ್ವರಿಗೆ ಪೂಜೆ ಮಾಡಲು ಹಿಂದೂಯೇತರ ವ್ಯಕ್ತಿಗೆ ಅವಕಾಶ ನೀಡಲಾಗಿದೆ. ಇದು ಅಲ್ಲಿನ ಸಂಪ್ರದಾಯಗಳಿಗೆ ವಿರುದ್ಧ. ಹೀಗಾಗಿ, ಪ್ರಕರಣದ ತುರ್ತು ವಿಚಾರಣೆಯ ಅಗತ್ಯವಿದೆ ಎಂದು ವಕೀಲರು ಹೇಳಿದಾಗ, ಸಿಜೆಐ ಗವಾಯಿ ಅವರು ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು.
ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟಕರನ್ನಾಗಿ ಕರ್ನಾಟಕ ಸರ್ಕಾರ ಆಹ್ವಾನಿಸಿದೆ. ಇದು ಕನ್ನಡಪರ ಮತ್ತು ಹಿಂದು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ. ಮುಷ್ತಾಕ್ ಅವರು ಈ ಹಿಂದೆ ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆ ಬಳಿಕ ಈ ವಿವಾದ ಉದ್ಭವಿಸಿದೆ. ಇದಕ್ಕೂ ಮೊದಲು ಕರ್ನಾಟಕ ಹೈಕೋರ್ಟ್ನಲ್ಲಿ ಇದೇ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಪೀಠ, ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಲ್ಲಿಸಿದ ಅರ್ಜಿ ಸೇರಿದಂತೆ ಎಲ್ಲ ಮನವಿಗಳನ್ನು ವಜಾ ಮಾಡಿದೆ. ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಉಲ್ಲಂಘನೆಯಾಗಿದೆ ಎಂಬುದು ಕಂಡುಬಂದಿಲ್ಲ. ಅದನ್ನು ಸಾಬೀತುಪಡಿಸುವಲ್ಲಿ ಅರ್ಜಿದಾರರು ವಿಫಲವಾಗಿದ್ದಾರೆ. ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮವನ್ನು ಬೇರೆ ಧರ್ಮದ ವ್ಯಕ್ತಿಯೊಬ್ಬರು ಉದ್ಘಾಟಿಸುವುದರಿಂದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಯಾವುದೇ ಮೌಲ್ಯಗಳು ಉಲ್ಲಂಘನೆಯಾಗುತ್ತವೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಜಿಗಳನ್ನು ವಜಾಗೊಳಿಸಿತ್ತು.