ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಿಂದ ಶುರುವಾಗಿ ಮುಂದಿನ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ (ಇವಿಎಂ) ಅಭ್ಯರ್ಥಿಗಳ ಬಣ್ಣದ ಫೋಟೋಗಳು ಇರಲಿವೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2015ರಿಂದ ಇವಿಎಂಗಳಲ್ಲಿ ಅಭ್ಯರ್ಥಿಗಳ ಕಪ್ಪು ಬಿಳುಪಿನ ಫೋಟೋಗಳಿದ್ದು, ಇದನ್ನು ಅನೇಕ ಮತದಾರರು ಗುರುತಿಸಲು ಕಷ್ಟಪಡುತ್ತಿದ್ದಾರೆ ಎಂದು ಆಯೋಗ ಹೇಳಿದೆ. ಈ ಗೊಂದಲಗಳನ್ನು ಪರಿಹರಿಸಲು ಇವಿಎಂ ಮತಪತ್ರಗಳಲ್ಲಿ ಅಭ್ಯರ್ಥಿಗಳ ಛಾಯಾಚಿತ್ರಗಳನ್ನು ಬಣ್ಣದಲ್ಲಿ ಮುದ್ರಿಸಲಾಗುತ್ತದೆ. ಫೋಟೋಗಳು ಚೆನ್ನಾಗಿ ಕಾಣಲು ಅಭ್ಯರ್ಥಿಯ ಮುಖಭಾಗವು ಫೋಟೋ ಜಾಗವಿರುವ ನಾಲ್ಕನೇ ಮೂರು ಭಾಗವನ್ನು ಆಕ್ರಮಿಸುತ್ತದೆ. ಅಂದರೆ ದೊಡ್ಡ ಫೋಟೋವನ್ನು ಮುದ್ರಿಸಲಾಗುತ್ತದೆ ಎಂದು ಆಯೋಗ ಮಾಹಿತಿ ನೀಡಿದೆ. ಇವಿಎಂನಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಸರಣಿ ಸಂಖ್ಯೆಗಳು ಮತ್ತು ಮೇಲಿನವುಗಳಲ್ಲಿ ಯಾವುದೂ ಅಲ್ಲ (ನೋಟಾ) ಆಯ್ಕೆಯನ್ನು ಅಂತಾರಾಷ್ಟ್ರೀಯ ರೂಪದಲ್ಲಿ ಭಾರತೀಯ ಅಂಕಿಗಳಲ್ಲಿ ಮುದ್ರಿಸಲಾಗುತ್ತದೆ. ಇದರ ಗಾತ್ರವನ್ನು ಸ್ಪಷ್ಟತೆಗಾಗಿ ಹೆಚ್ಚಿಸಲಾಗುತ್ತದೆ. ಅಂದರೆ, ಅಭ್ಯರ್ಥಿಗಳ ಸರಣಿ ಸಂಖ್ಯೆಗಳ ಗಾತ್ರ(ಫಾಂಟ್) 30 ಇರಲಿದ್ದು, ಅವುಗಳನ್ನು ದಪ್ಪವಾಗಿ ಮುದ್ರಿಸಲಾಗುತ್ತದೆ ಎಂದು ತಿಳಿಸಿದೆ. ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲ ಅಭ್ಯರ್ಥಿಗಳ ಹೆಸರು ಮತ್ತು ನೋಟಾ ಆಯ್ಕೆಯನ್ನು ಒಂದೇ ಫಾಂಟ್‌ನಲ್ಲಿಯೂ ಮತ್ತು ಸುಲಭವಾಗಿ ಓದಲು ಸಾಧ್ಯವಾಗುವಂತಹ ಗಾತ್ರದಲ್ಲಿ ಮುದ್ರಿಸಲಾಗುತ್ತದೆ ಎಂದು ಹೇಳಿದೆ.
ಹಲವಾರು ಅಭ್ಯರ್ಥಿಗಳು ಒಂದೇ ಹೆಸರನ್ನು ಹಂಚಿಕೊಂಡಿರುವ ಅಥವಾ ಒಂದೇ ರೀತಿಯ ಹೆಸರುಗಳನ್ನು ಹೊಂದಿರುವ ಕ್ಷೇತ್ರಗಳಲ್ಲಿ ಗೊಂ ಆಗುವುದನ್ನು ತಪ್ಪಿಸಲು 10 ವರ್ಷದ ಹಿಂದೆ ಇವಿಎಂನಲ್ಲಿ ಅಭ್ಯರ್ಥಿಗಳ ಚಿತ್ರಗಳನ್ನು ಬಳಸಲು ಪ್ರಾರಂಭಿಸಲಾಗಿತ್ತು. ಇನ್ನು, ಕರ್ನಾಟಕದಲ್ಲೂ ಮುಂದಿನ ವರ್ಷ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಯಲಿದೆ. ರಾಜ್ಯ ಮುಖ್ಯ ಚುನಾವಣಾ ಆಯೋಗ ಇದರ ಪೂರ್ವ ಸಿದ್ದತೆ ಆರಂಭಿಸಿದೆ. ಈ ಕುರಿತಂತೆ ಇಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ 2002ರಲ್ಲಿ ಎಸ್‌ಐಆರ್ ನಡೆಸಲಾಗಿತ್ತು. ಇದೀಗ 23 ವರ್ಷಗಳ ನಂತರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮತದಾರರ ಮನೆಗೂ ಹೋಗಿ ಮತದಾರರ ಗುರುತಿನ ಚೀಟಿ ಪರಿಶೀಲಿಸಲಿದ್ದಾರೆ. 2002ರ ಮತದಾರರ ವಿಶೇಷ ಪರಿಷ್ಕರಣೆ ಪಟ್ಟಿ ಹಾಗೂ 2025ರ ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಪರಿಶೀಲಿಸಲಾಗುವುದು. ಬಿಎಲ್‌ಒಗಳು ಮನೆ ಭೇಟಿಯ ವೇಳೆ ಪ್ರತಿ ಮನೆಗೂ ಎರಡು ನಮೂನೆಗಳನ್ನು ನೀಡಿ ಮಾಹಿತಿ ಪಡೆಯಲಿದ್ದಾರೆ. ಅದರಲ್ಲಿ ಒಂದು ನಮೂನೆಯನ್ನು ಅಧಿಕಾರಿಗಳು ಸಹಿ ಮಾಡಿ ಮತದಾರರಿಗೆ ಹಿಂತಿರುಗಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.