ಜೇರುಸಲೆಮ್: ಗಾಜಾ ನಗರದ ಕರಾವಳಿ ಭಾಗದ ದೊಡ್ಡ ಪ್ರದೇಶವೊಂದನ್ನು ಹೊರತುಪಡಿಸಿ ಉಳಿದ ಬಹುಭಾಗವನ್ನು ಇಸ್ರೇಲ್ ಸೇನೆಯು ಸುತ್ತುವರಿದಿದೆ. ಒಂದೆಡೆ, ಸಾವಿರಾರು ಪ್ಯಾಲೆಸ್ಟೇನಿಯನ್ನರು ನಗರವನ್ನು ತೊರೆಯುತ್ತಿದ್ದರೆ ಇನ್ನೊಂದೆಡೆ, ಇಸ್ರೇಲ್ ಭೂಸೇನೆಯು ಎರಡನೇ ದಿನವೂ ತನ್ನ ದಾಳಿಯನ್ನು ಮುಂದುವರಿಸಿದೆ. ಇಸ್ರೇಲ್ನ ಭೂಸೇನೆಯು ಗಾಜಾ ನಗರದ ಮೇಲೆ ನಡೆಸುತ್ತಿರುವ ತೀವ್ರ ದಾಳಿಗೆ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಅರ್ಧದಷ್ಟು ಜನರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಗಾಜಾದ ಆಸ್ಪತ್ರೆಯಲ್ಲಿದ್ದ 80 ರೋಗಿಗಳಿಗೆ ಈ ದಾಳಿಯ ಕಾರಣದಿಂದ ಹೊರಹೋಗುವಂತೆ ಹೇಳಲಾಗಿದೆ.
ಆಹಾರ, ನೀರು, ಔಷಧ ಸೇರಿದಂತೆ ಗಾಜಾ ಜನರಿಗೆ ಮೂಲಸೌಲಭ್ಯ, ನೆರವು ಒದಗಿಸುತ್ತಿರುವ ಅಂತರರಾಷ್ಟ್ರೀಯ ಮಟ್ಟದ ಸುಮಾರು 20 ಸಂಸ್ಥೆಗಳು ದಾಳಿಯನ್ನು ಕಟು ಮಾತುಗಳಲ್ಲಿ ಖಂಡಿಸಿವೆ. 'ಭೂಸೇನೆಯ ಕಾರ್ಯಾಚರಣೆಯು ನರಮೇಧದ ಯುದ್ಧವನ್ನು ವಿಸ್ತರಿಸಿದಂತೆ' ಎಂದಿರುವ ಕತಾರ್, ಇಸ್ರೇಲ್ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ. 'ಕಳೆದ ಕೆಲವು ದಿನಗಳಲ್ಲಿ ಗಾಜಾ ನಗರದ ಎತ್ತರದ ಕಟ್ಟಡಗಳನ್ನು ಗುರಿಯಾಗಿಸಿ ಸುಮಾರು 150ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದ್ದೇವೆ' ಎಂದು ಇಸ್ರೇಲ್ ಹೇಳಿಕೊಂಡಿದೆ. ಈ ಕಟ್ಟಡಗಳಲ್ಲಿ ಸಾವಿರಾರು ಪ್ಯಾಲೆಸ್ಟೇನಿಯನ್ನರು ಆಶ್ರಯ ಪಡೆದುಕೊಂಡಿದ್ದರು. 'ಕಣ್ಗಾವಲು ನಡೆಸಲು ಹಮಾಸ್ ಬಂಡುಕೋರರು ಇಂಥ ಕಟ್ಟಡಗಳನ್ನು ಬಳಸಿಕೊಳ್ಳುತ್ತಾರೆ' ಎಂದು ಇಸ್ರೇಲ್ ದೂರಿದೆ. ಉತ್ತರ ಗಾಜಾದಿಂದ ದಕ್ಷಿಣ ಗಾಜಾಗೆ ತೆರಳುವಂತೆ ಇಸ್ರೇಲ್ ಸೇನೆ ಈಗಾಗಲೇ ಎಚ್ಚರಿಕೆ ನೀಡಿದೆ. ಇದಕ್ಕಾಗಿ ಇನ್ನೊಂದು ಹೊಸ ಮಾರ್ಗವನ್ನು ತೆರೆದಿದೆ. 'ಈ ಮಾರ್ಗವು ಬುಧವಾರ ಸಂಜೆಯಿಂದ ಆರಂಭಗೊಂಡು ಎರಡು ದಿನ ತೆರೆದಿರಲಿದೆ' ಎಂದು ಇಸ್ರೇಲ್ ತಿಳಿಸಿದೆ. 'ಉತ್ತರ ಗಾಜಾದ ಮುಖ್ಯ ದೂರಸಂಪರ್ಕ ಮೂಲಸೌರ್ಕಯದ ಮೇಲೆ ಇಸ್ರೇಲ್ ಸೇನೆಯು ನಿರಂತರವಾಗಿ ದಾಳಿ ನಡೆಸುತ್ತಿದೆ. ಇದರಿಂದಾಗಿ ಬುಧವಾರ ಬೆಳಿಗ್ಗೆಯಿಂದ ಇಲ್ಲಿನ ದೂರವಾಣಿ ಸಂಪರ್ಕ ಮತ್ತು ಅಂತರ್ಜಾಲ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ' ಎಂದು ಪ್ಯಾಲೆಸ್ಟೇನ್ ದೂರಸಂಪರ್ಕ ಪ್ರಾಧಿಕಾರ ಹೇಳಿದೆ.