ದೋಹಾ: ಯುರೋಪ್ ಹಾಗೂ ಅಮೆರಿಕ ಸೇರಿಕೊಂಡು ರಕ್ಷಣೆಗಾಗಿ ರಚಿಸಿಕೊಂಡಿರುವ "ನ್ಯಾಟೋ' ಪಡೆಯ ಮಾದರಿಯಲ್ಲೇ ಇಸ್ಲಾಮಿಕ್ ರಾಷ್ಟ್ರಗಳು ಒಂದಾಗಿ "ಅರಬ್ ಸೇನಾಪಡೆ'ಯನ್ನು ರೂಪಿಸಿಕೊಳ್ಳಲು ಮುಂದಾಗಿವೆ ಎನ್ನಲಾಗಿದೆ. ಈ ಬಗ್ಗೆ ಕತಾರ್ನ ದೋಹಾದಲ್ಲಿ ನಡೆದ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಇಸ್ಲಾಮಿಕ್ ಸೇನೆಯನ್ನು ನಿರ್ಮಾಣ ಮಾಡುವ ಬಗ್ಗೆ ದಶಕಗಳ ಹಿಂದೆಯೇ ಸೌದಿ ಅರೇಬಿಯಾ ಘೋಷಣೆ ಮಾಡಿತ್ತು. ಆದರೆ ಒಮ್ಮತ ಸಿಗದ ಕಾರಣ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇತ್ತೀಚೆಗೆ ಕತಾರ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೇ ಈ ಸೇನಾಪಡೆಯ ರಚನೆಗಾಗಿ ಎಲ್ಲ ಇಸ್ಲಾಮಿಕ್ ರಾಷ್ಟ್ರಗಳು ಒಂದಾಗಿವೆ. ಯಾವುದೇ ಇಸ್ಲಾಮಿಕ್ ರಾಷ್ಟ್ರದ ಮೇಲೆ ದಾಳಿ ನಡೆದರೆ ನ್ಯಾಟೋ ಮಾದರಿಯಲ್ಲೇ ಈ ಸೇನಾಪಡೆ ಸಹಾಯಕ್ಕೆ ನಿಲ್ಲಲಿದೆ. ದೋಹಾದಲ್ಲಿ ನಡೆದ ತುರ್ತು ಸಭೆಯಲ್ಲಿ ಪಾಕಿಸ್ಥಾನ ಕೂಡ ಭಾಗವಹಿಸಿದ್ದು, ಅತ್ಯಂತ ತುರ್ತಾಗಿ ಸೇನಾಪಡೆಯನ್ನು ರಚಿಸಬೇಕು ಎಂದು ಆಗ್ರಹಿಸಿದೆ. ಈ ಎಲ್ಲ ದೇಶಗಳ ಪೈಕಿ ಪಾಕಿಸ್ಥಾನ ಮಾತ್ರ ಅಣ್ವಸ್ತ್ರ ಹೊಂದಿದ್ದು, ಅದರ ಬೇಡಿಕೆಗೆ ಎಲ್ಲ ರಾಷ್ಟ್ರಗಳು ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಭೆಯಲ್ಲಿ ಟರ್ಕಿ, ಕತಾರ್ ಸಹಿತ ಹಲವು ದೇಶಗಳು ಭಾಗಿಯಾಗಿದ್ದವು. ಸುಮಾರು 40 ದೇಶಗಳನ್ನು ಒಳಗೊಂಡ ಸೇನಾಪಡೆ ಇದಾಗಿರಲಿದ್ದು, ಮೊದಲಿಗೆ 20 ಸಾವಿರ ಮಂದಿ ಸೈನಿಕರನ್ನು ಒದಗಿಸಲು ಈಜಿಪ್ಟ್ ಸಿದ್ಧವಾಗಿದೆ ಎನ್ನಲಾಗಿದೆ. ಅಲ್ಲದೆ ಈ ಸೇನಾಪಡೆಯ ಮುಖ್ಯ ಕಚೇರಿಯನ್ನು ಕೈರೋದಲ್ಲಿ ನಿರ್ಮಾಣ ಮಾಡಬೇಕು. ಮೊದಲ ಕಮಾಂಡರ್ ಈಜಿಪ್ಟ್ನವರಾಗಿರಬೇಕು ಎಂಬ ಬೇಡಿಕೆಯನ್ನಿಟ್ಟಿದೆ ಎನ್ನಲಾಗಿದೆ. ಇರಾಕ್ನ ಪ್ರಧಾನಿ ಮೊಹಮ್ಮದ್ ಅಲ್ ಸುದಾನಿ ಕೂಡ ಇಸ್ಲಾಮಿಕ್ ಸೇನೆಯ ನಿರ್ಮಾಣಕ್ಕೆ ಆಗ್ರಹಿಸಿದ್ದಾರೆ.
ಅರಬ್ ಸೇನೆ ರಚನೆಯ ಬಗ್ಗೆ ಜಾಗತಿಕ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದು, ದಶಕಗಳಿಂದ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ ಇದು ಜಾರಿಗೆ ಬರುವ ಯಾವುದೇ ಸೂಚನೆ ಕಾಣುತ್ತಿಲ್ಲ. ಪ್ರತಿಯೊಂದು ರಾಷ್ಟ್ರವು ಇಲ್ಲಿ ನಾಯಕತ್ವ ಬಯಸುತ್ತಿರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಒಂದು ವೇಳೆ ಅರಬ್ ಸೇನಾಪಡೆ ರಚನೆಯಾದರೆ ಅದು ಭಾರತದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಪಶ್ಚಿಮ ಏಷ್ಯಾದ ಬಹುತೇಕ ಎಲ್ಲ ರಾಷ್ಟ್ರಗಳು ಈ ಸೇನಾಪಡೆಯಲ್ಲಿ ಸ್ಥಾನ ಪಡೆದುಕೊಳ್ಳಲಿವೆ. ಹೀಗಾಗಿ ಪಾಕ್ ಜತೆಗೆ ವೈಷಮ್ಯ ಹೊಂದಿರುವ ಭಾರತಕ್ಕೆ 40ಕ್ಕೂ ಹೆಚ್ಚು ರಾಷ್ಟ್ರಗಳು ಸವಾಲು ಒಡ್ಡಬಹುದು. ಚಾಬಹಾರ್ ಬಂದರು ಯೋಜನೆಯಿಂದ ಇರಾನ್ ಹಿಂದೆ ಸರಿಯಬಹುದು. ಭಾರತದ ರಫ್ತು ಮಾರ್ಗಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.