ಮುಂಬೈ : ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ (Asia Cup 2025) ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಆಟವಾಡಿದ್ದಕ್ಕೆ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಪಾಕಿಸ್ತಾನದ ಜೊತೆ ಭಾರತ (IND VS PAK) ಕ್ರಿಕೆಟ್ ಆಡಲು ಅವಕಾಶ ನೀಡುವ ಸರ್ಕಾರದ ನಿರ್ಧಾರವನ್ನು ವಿವರಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಭಾರತ ತನ್ನ ಸಾಂಪ್ರದಾಯಿಕ ಎದುರಾಳಿಯೊಂದಿಗೆ ದ್ವಿಪಕ್ಷೀಯ ಪಂದ್ಯವನ್ನು ಆಡುತ್ತಿಲ್ಲ, ಈ ಪಂದ್ಯಾವಳಿಯಲ್ಲಿ ಬೇರೆ ದೇಶಗಳ ತಂಡಗಳು ಕೂಡ ಭಾಗವಹಿಸುತ್ತವೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಏಷ್ಯನ್ ಚಾಂಪಿಯನ್‌ಶಿಪ್, ವಿಶ್ವಕಪ್ ಮತ್ತು ಏಷ್ಯಾ ಕಪ್‌ನಂತಹ ಪಂದ್ಯಾವಳಿಗಳು ಬಹುರಾಷ್ಟ್ರೀಯ, ಬಹುಪಕ್ಷೀಯ ಪಂದ್ಯಗಳು. ಇದರಲ್ಲಿ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಆಡುತ್ತವೆ. ನಾವೇನಾದರೂ ಒಂದು ದೇಶದೊಂದಿಗೆ ಆಟವಾಡುವುದಿಲ್ಲ ಎಂದು ಹಿಂದೆ ಸರಿಯಲು ನಿರ್ಧರಿಸಿದರೆ ಏಷ್ಯಾ ಕಪ್, ಒಲಿಂಪಿಕ್ಸ್‌ನಂತಹ ಪಂದ್ಯಗಳಿಂದ ಭಾರತವನ್ನು ಹೊರಗಿಡಲಾಗುತ್ತದೆ. ಇದರಿಂದ ನಮಗೇ ನಷ್ಟ ಎಂದು ಹೇಳಿದ್ದಾರೆ.
ಏಷ್ಯಾ ಕಪ್ ಮತ್ತು ಒಲಿಂಪಿಕ್ಸ್‌ನಂತಹ ಪಂದ್ಯಾವಳಿಗಳು ಪಾಕಿಸ್ತಾನಕ್ಕೆ ಮಾತ್ರವಲ್ಲ. ನಾವು ಪಂದಯಾವಳಿಗೆ ನೆರೆಯ ದೇಶ ಪಾಕಿಸ್ತಾನವನ್ನು ಪ್ರತ್ಯೇಕವಾಗಿ ಆಹ್ವಾನಿಸಿಲ್ಲ. ಅಂತಹ ಪಂದ್ಯಾವಳಿಯಲ್ಲಿ ಭಾಗವಹಿಸದಿದ್ದರೆ ಅದು ಭಾರತದ ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂದಿದ್ದಾರೆ. ಒಂದುವೇಳೆ ಭಾರತ ಏಷ್ಯಾ ಕಪ್‌ನಲ್ಲಿ ಪಾಕಿಸ್ತಾನದ ಜೊತೆ ಆಡದಿದ್ದರೆ, ಭಾರತ ಪಂದ್ಯದಿಂದಲೇ ಹೊರಗುಳಿಯುತ್ತದೆ. ಹೀಗಾಗಿ ಅನುಮತಿ ನೀಡಲಾಯಿತು. 'ಒಂದು ದೇಶದೊಂದಿಗಿನ ನಮ್ಮ ದ್ವೇಷದಿಂದಾಗಿ ನಾವು ಒಲಿಂಪಿಕ್ಸ್‌ಗೆ ಹೋಗದಿದ್ದರೆ, ಅದರಿಂದ ನಷ್ಟ ಯಾರಿಗೆ? ಆದ್ದರಿಂದ, ನಮ್ಮ ಭಾವನೆಯ ಜೊತೆ ಅದರ ಹಿಂದಿನ ತಾರ್ಕಿಕ ಚಿಂತನೆಯೂ ಇರಬೇಕು' ಎಂದು ಕಿರಣ್ ರಿಜಿಜು ಹೇಳಿದ್ದಾರೆ.