ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ಟೀನಿಯನ್ನರ ನಡುವಿನ ಶಾಂತಿಯುತ ಇತ್ಯರ್ಥ ಮತ್ತು ಎರಡು ಪ್ರದೇಶಗಳ ಪರಿಹಾರದ ಅನುಷ್ಠಾನದ ಕುರಿತು ನ್ಯೂಯಾರ್ಕ್ ಘೋಷಣೆಯನ್ನು ಅನುಮೋದಿಸುವ ಬಗ್ಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ನಿರ್ಣಯದ ಪರವಾಗಿ ಮತ ಚಲಾಯಿಸಿದೆ. ಫ್ರಾನ್ಸ್ ಮಂಡಿಸಿದ ಈ ನಿರ್ಣಯವನ್ನು 142 ರಾಷ್ಟ್ರಗಳು ಪರವಾಗಿ ಮತ ಚಲಾಯಿಸುವ ಮೂಲಕ ಅಂಗೀಕರಿಸಲಾಗಿದೆ. ಶುಕ್ರವಾರ ನಡೆದ ಮತದಾನದಲ್ಲಿ, 'ಪ್ಯಾಲೆಸ್ಟೈನ್ ಪ್ರಶ್ನೆಯ ಶಾಂತಿಯುತ ಇತ್ಯರ್ಥ ಮತ್ತು ಎರಡು-ರಾಜ್ಯ ಪರಿಹಾರದ ಅನುಷ್ಠಾನದ ಕುರಿತು ನ್ಯೂಯಾರ್ಕ್ ಘೋಷಣೆಯ ಅನುಮೋದನೆ' ಎಂಬ ಶೀರ್ಷಿಕೆಯಡಿ ನಿರ್ಣಯದ ಪರವಾಗಿ ಮತ ಚಲಾಯಿಸಿದ ರಾಷ್ಟ್ರಗಳಲ್ಲಿ ಭಾರತವೂ ಸೇರಿತ್ತು.
ಮುಖ್ಯವಾಗಿ ಎಲ್ಲಾ ಗಲ್ಫ್ ಅರಬ್ ರಾಷ್ಟ್ರಗಳು ಈ ಕ್ರಮವನ್ನು ಬೆಂಬಲಿಸಿದ್ದು, ಇಸ್ರೇಲ್, ಯುನೈಟೆಡ್ ಸ್ಟೇಟ್ಸ್, ಅರ್ಜೆಂಟೀನಾ, ಹಂಗೇರಿ, ಮೈಕ್ರೋನೇಷಿಯಾ, ನೌರು, ಪಲಾವ್, ಪಪುವಾ ನ್ಯೂಗಿನಿಯಾ, ಪರಾಗ್ವೆ ಮತ್ತು ಟೋಂಗಾ ದೇಶಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿವೆ. ಆದರೆ ಭಾರತ ದೊಡ್ಡ ಹೆಜ್ಜೆಯಾಗಿ ಪ್ಯಾಲೆಸ್ಟೈನ್ ಪರವಾಗಿ ಮತ ಚಲಾಯಿಸಿ ಎಲ್ಲ ದೇಶಗಳ ಹುಬ್ಬೇರಿಸುವಂತೆ ಮಾಡಿದೆ. ಈ ಮೊದಲು ಭಾರತ ಗಾಜಾ ಪರವಾಗಿ ನಿಂತಿತ್ತು. ಆದರೆ ಶುಕ್ರವಾರ ಭಾರತ ವಿಶ್ವಸಂಸ್ಥೆಯಲ್ಲಿ ಚಲಾಯಿಸಿದ ಮತ ಹಿಂದಿನ ನಿಲುವಿಗಿಂತ ಸ್ಪಷ್ಟ ಬದಲಾವಣೆಯನ್ನು ಸೂಚಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮೋದಿ ಸರ್ಕಾರ ಸಂಘರ್ಷದಲ್ಲಿ ಕದನ ವಿರಾಮವನ್ನು ಕೋರುವ ನಿರ್ಣಯಗಳನ್ನು ಬೆಂಬಲಿಸುವುದನ್ನು ತಪ್ಪಿಸಿತ್ತು. ಮೂರು ವರ್ಷಗಳಲ್ಲಿ ನಾಲ್ಕು ಬಾರಿ ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಿಂದ ಭಾರತ ದೂರವಿತ್ತು. ದಶಕಗಳಷ್ಟು ಹಳೆಯದಾದ ಸಂಘರ್ಷವನ್ನು ಪರಿಹರಿಸುವ ಕುರಿತು ಸೌದಿ ಅರೇಬಿಯಾ ಮತ್ತು ಫ್ರಾನ್ಸ್ ಜಂಟಿಯಾಗಿ ಮಾತುಕತೆಗಳನ್ನು ಮತ್ತೆ ಪ್ರಾರಂಭಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಿತ್ತು. ಇದಾದ ನಂತರ ಏಳು ಪುಟಗಳ ಘೋಷಣೆ ಹೊರಬಿದ್ದಿದೆ. 193 ಸದಸ್ಯರ ಸಾಮಾನ್ಯ ಸಭೆಯ ಘೋಷಣೆಯು ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯನ್ನು ಖಂಡಿಸಿದೆ. ಈ ದಾಳಿಯಲ್ಲಿ 1,200 ಜನರು ಸಾವನ್ನಪ್ಪಿದ್ದು, ಮತ್ತು 250 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಇರಿಸಲಾಗಿತ್ತು. ಗಾಜಾದಲ್ಲಿ ಇಸ್ರೇಲ್ ನಡೆಸಿದ ಪ್ರತೀಕಾರದ ಕಾರ್ಯಾಚರಣೆಯನ್ನು ಅದು ಟೀಕಿಸಿದೆ. ವ್ಯಾಪಕ ನಾಗರಿಕ ಸಾವುನೋವುಗಳು, ನಾಗರಿಕ ಮೂಲಸೌಕರ್ಯಗಳ ನಾಶ ಮತ್ತು ಮಾನವೀಯ ವಿಪತ್ತಿಗೆ ಕಾರಣವಾದ ಹಿಂಸಾಚಾರವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಪ್ಯಾಲೆಸ್ಟೀನಿಯನ್ನರ ವಿರುದ್ಧದ ಹಿಂಸಾಚಾರ ಮತ್ತು ಪ್ರಚೋದನೆಯನ್ನು ತಕ್ಷಣವೇ ಕೊನೆಗೊಳಿಸಲು, ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ಎಲ್ಲಾ ವಸಾಹತು, ಭೂಕಬಳಿಕೆ ಮತ್ತು ಸ್ವಾಧೀನ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಲು, ಯಾವುದೇ ಸ್ವಾಧೀನ ಯೋಜನೆ ಅಥವಾ ವಸಾಹತು ನೀತಿಯನ್ನು ಸಾರ್ವಜನಿಕವಾಗಿ ತ್ಯಜಿಸಲು ಮತ್ತು ವಸಾಹತುಗಾರರ ಹಿಂಸಾಚಾರವನ್ನು ಕೊನೆಗೊಳಿಸಲು ಇಸ್ರೇಲ್‌ಗೆ ಕರೆ ನೀಡಿತು. ಗಾಜಾ ಪ್ಯಾಲೆಸ್ಟೀನಿಯನ್ ರಾಜ್ಯದ ಅವಿಭಾಜ್ಯ ಅಂಗವಾಗಿದೆ ಮತ್ತು ಅದನ್ನು ಪಶ್ಚಿಮ ದಂಡೆಯೊಂದಿಗೆ ಏಕೀಕರಿಸಬೇಕು. ಯಾವುದೇ ಆಕ್ರಮಣ, ಮುತ್ತಿಗೆ, ಪ್ರಾದೇಶಿಕ ಕಡಿತ ಅಥವಾ ಬಲವಂತದ ಸ್ಥಳಾಂತರ ಇರಬಾರದು ಎಂದು ಘೋಷಣೆಯು ಹೇಳಿದೆ.