ನವದೆಹಲಿ: ಗೋದಾವರಿ-ಕಾವೇರಿ ನದಿಗಳ ಜೋಡಣೆಯಲ್ಲಿ ನೀರಿನ ಪಾಲು ಹಂಚಿಕೆ ಸೂತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಸೇರಿದಂತೆ ಪಾಲುದಾರ ರಾಜ್ಯಗಳು, ನೀರಿನ ಪಾಲನ್ನು ನ್ಯಾಯಬದ್ಧವಾಗಿ ಹಂಚಿಕೆ ಮಾಡಿದರಷ್ಟೇ ಕರಡು ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧ ಎಂದು ಸ್ಪಷ್ಟಪಡಿಸಿವೆ. ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಅಂತರ್ ನದಿಗಳ ಜೋಡಣೆಯ ವಿಶೇಷ ಸಮಿತಿಯ 23ನೇ ಸಭೆ ಒಮ್ಮತಾಭಿಪ್ರಾಯಕ್ಕೆ ಬರುವಲ್ಲಿ ವಿಫಲವಾಯಿತು. ಇನ್ನೊಂದೆಡೆ, ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡು ಪೂರ್ಣ ಬೆಂಬಲ ವ್ಯಕ್ತಪಡಿಸಿತು. ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನ ಮಾಡಬೇಕು ಎಂದು ಆಗ್ರಹಿಸಿತು. ನದಿ ಜೋಡಣೆಗೆ ತಾತ್ವಿಕ ಒಪ್ಪಿಗೆ ವ್ಯಕ್ತಪಡಿಸಿರುವ ತೆಲಂಗಾಣವು, ಪೋಲವರಂನಿಂದಲೇ ನದಿ ತಿರುವು ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ಪಟ್ಟು ಹಿಡಿದಿತು. ನೀರಿನ ಹಂಚಿಕೆ ಬಗ್ಗೆ ರಾಜ್ಯಗಳ ಆತಂಕ ನಿವಾರಿಸಲು ಪಾಲುದಾರ ರಾಜ್ಯಗಳ ಜತೆಗೆ ವಿಶೇಷ ಸಭೆ ಕರೆಯಬೇಕು ಎಂದು ಪಾಟೀಲ ಅವರು ಇಲಾಖೆಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆಯಡಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಕುಡಿಯುವ ನೀರು, ಕೈಗಾರಿಕೆ ಹಾಗೂ ನೀರಾವರಿ ಉದ್ದೇಶಕ್ಕೆ ನೀರಿನ ಹಂಚಿಕೆ ಮಾಡಲಾಗಿದೆ. ಆದರೆ, ಕರ್ನಾಟಕಕ್ಕೆ ಕೈಗಾರಿಕೆ ಹಾಗೂ ಕುಡಿಯುವ ಉದ್ದೇಶಕ್ಕೆ ಮಾತ್ರ ಹಂಚಿಕೆ ಆಗಿದೆ. ರಾಜ್ಯಕ್ಕೆ ನೈಜವಾಗಿ 2.19 ಟಿಎಂಸಿ ಅಡಿ ಮಾತ್ರ ಸಿಗಲಿದೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಲಿದೆ ಎಂಬುದು ಕರ್ನಾಟಕದ ಪ್ರಮುಖ ತಕರಾರು. ಈ ಮಹಾ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರ ಧ್ವನಿ ಎತ್ತಿದೆ.ಗೋದಾವರಿ-ಕಾವೇರಿ ನದಿಗಳ ಜೋಡಣೆ ಯೋಜನೆಯಲ್ಲಿ ಗೋದಾವರಿ-ಕೃಷ್ಣಾ (ನಾಗಾರ್ಜುನಸಾಗರ), ಕೃಷ್ಣಾ-ಪೆನ್ನಾರ್ (ಸೋಮಶಿಲಾ) ಹಾಗೂ ಪೆನ್ನಾರ್-ಕಾವೇರಿ ನದಿಗಳ ಜೋಡಣೆ ಮಾಡಲಾಗುವುದು. ಗೋದಾವರಿ ಕಣಿವೆಯ ಹೆಚ್ಚುವರಿ 248 ಟಿಎಂಸಿ ಅಡಿ ನೀರನ್ನು ಕೃಷ್ಣಾ, ಪೆನ್ನಾರ್ ಹಾಗೂ ಕಾವೇರಿ ಕಣಿವೆಯ ಭಾಗಕ್ಕೆ ಹರಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಯೋಜಿಸಿತ್ತು. ಈ ಪ್ರಸ್ತಾವಕ್ಕೆ ರಾಜ್ಯಗಳು ಒಪ್ಪಿರಲಿಲ್ಲ. ಬಳಿಕ ಪರಿಷ್ಕೃತ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಗೋದಾವರಿ ನದಿಯ ಉಪನದಿ ಇಂದ್ರಾವಳಿಯಲ್ಲಿ ಬಳಕೆಯಾಗದ 147.93 ಟಿಎಂಸಿ ಅಡಿ ನೀರನ್ನು ನದಿ ತಿರುವು ಯೋಜನೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಬೇಡ್ತಿ-ವರದಾ ನದಿ ಜೋಡಣೆಯಿಂದ 18 ಟಿಎಂಸಿ ಅಡಿ ನೀರು ದೊರಕಲಿದೆ ಎಂದು ಅಂದಾಜಿಸಲಾಗಿದೆ.